ಸಿರುಗುಪ್ಪ: ತಾಲೂಕಿನ ರಾವಿಹಾಳು ಗ್ರಾಮದಲ್ಲಿ ಮೇ 27ರಂದು ನಡೆಯಲಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಭಾಗವಹಿಸುತ್ತಾರೆ ಎನ್ನುವ ಕಾರಣದಿಂದ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಳೆದ ಒಂದು ವಾರದಿಂದ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೊಮ್ಮಲಾಪುರ, ಮಿಟ್ಟೇಸೂಗೂರು, ಗುಬ್ಬಿಹಾಳ್, ಅಗಸನೂರು ಗ್ರಾಮಗಳು ಬರುತ್ತಿದ್ದು ಈ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಬಹುಗ್ರಾಮ ಕುಡಿಯುವ ನೀರಿನ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆ ಕೊರತೆ ಯಿಂದ ಕೆರೆಗಳಲ್ಲಿ ನೀರು ಸರಿಯಾಗಿ ತುಂಬಿಸಿಲ್ಲ. ಇರುವ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದ್ದು, ಚರಂಡಿಗಳು, ಕಸಕಡ್ಡಿಯಿಂದ ಕೂಡಿದ್ದು, ನೀರು ಹರಿಯಲು ಯೋಗ್ಯವಾಗಿಲ್ಲ. ಚರಂಡಿಗಳು ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗಿವೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಘೋಷಿಸಲಾಗಿದ್ದರೂ ಗ್ರಾಮದಲ್ಲಿರುವ ರಸ್ತೆಗಳಲ್ಲಿ ಬಯಲು ಬಹಿರ್ದೆಸೆ ಮಾಡುವುದು ಸಾಮಾನ್ಯವಾಗಿದೆ.
Related Articles
ರಾವಿಹಾಳ್ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿನ ಮಹಿಳೆಯರು ಮಿಟ್ಟೆಸೂಗೂರು ರಸ್ತೆಯಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ತೀವ್ರವಾದ ಅನೈರ್ಮಲ್ಯ ಉಂಟಾಗಿದೆ. ಮಾತ್ರವಲ್ಲದೇ ಈ ರಸ್ತೆಯ ಎಡ ಮತ್ತು ಬಲಬದಿ ರೈತರ ಜಮೀನುಗಳು ಇರುವುದರಿಂದ ರೈತರಿಗೆ ತಮ್ಮ ಜಮೀನುಗಳಿಗೆ ಓಡಾಡಲು ತೀವ್ರ ಸಮಸ್ಯೆಯಾಗುತ್ತಿದೆ. ರಾವಿಹಾಳ್ ಮತ್ತು ಮಿಟ್ಟೆಸೂಗೂರು ಗ್ರಾಮದ ಮಧ್ಯೆ ಹಳ್ಳ ಇರುವುದರಿಂದ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಹಳ್ಳದ ಅಪಾರ ಪ್ರಮಾಣದ ನೀರಿನ ಹರಿವಿನಿಂದಾಗಿ ಎರಡು ಗ್ರಾಮಗಳ ಮಧ್ಯ ಸಂಪರ್ಕ ಕಡಿತವಾಗುವುದು ಸಾಮಾನ್ಯವಾಗಿರುತ್ತದೆ. ಮಿಟ್ಟಿಸೂಗೂರು ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಳ್ಳಕ್ಕೆ ಸೇತುವೆ ನಿರ್ಮಾಣವಾಗಬೇಕೆಂಬುದು ಗ್ರಾಮಸ್ತರ ಒತ್ತಾಯವಾಗಿದೆ.
ಗ್ರಾಮದಲ್ಲಿ ನೀರು ಪೂರೈಕೆ ಮಾಡಲು ಕಟ್ಟಿರುವ ಸಣ್ಣ ನೀರಿನ ತೊಟ್ಟಿಗಳ ಸುತ್ತಲೂ ಬೇಲಿ ಬೆಳೆದಿದ್ದು, ಹಾವು, ಚೇಳುಗಳ ಆವಾಸಸ್ಥಾನವಾಗಿವೆ, ಕೆರೆ ಇದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಬೋರ್ ವೆಲ್ ನೀರನ್ನು ಬಳಸಬೇಕಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಮುಕ್ತಿ ನೀಡುತ್ತಾರೆಯೇ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಮಾಡಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಜಿಲ್ಲಾಧಿಕಾರಿಗಳು ಗ್ರಾಮದ ಮನೆಮನೆಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಲಿದ್ದು, ಸಂಜೆ 5ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಂ.ಎಸ್. ಸೋಮಲಿಂಗಪ್ಪ ಭಾಗವಹಿಸಲಿದ್ದಾರೆ. ಮೇ 27ರಂದು ಜಿಲ್ಲಾ ಧಿಕಾರಿಗಳು ಬೆಳಗ್ಗೆ 8 ಗಂಟೆಯಿಂದಲೇ ರಾವಿಹಾಳ್ ಗ್ರಾಮದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆಂದು ತಹಶೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ ತಿಳಿಸಿದ್ದಾರೆ.
ಆರ್. ಬಸವರೆಡ್ಡಿ ಕರೂರು