ನರೇಗಲ್ಲ: ಗ್ರಾಮೀಣ ಪ್ರದೇಶದ ಬಡವರಿಗಾಗಿ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಬಸವ ವಸತಿ ಯೋಜನೆ, ಅಂಬೇಡ್ಕರ್ ಯೋಜನೆಗಳಿಗೆ ಅನುದಾನದ ಕೊರತೆಯಿಂದ ಬಡವಾಗಿದ್ದು, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲಾಗದೆ ಅತಂತ್ರರಾಗಿದ್ದಾರೆ.
ನರೇಗಲ್ಲ ಹೋಬಳಿಯ ಅಬ್ಬಿಗೇರಿ, ಯರೇಬೇಲೇರಿ, ಗುಜಮಾಗಡಿ, ಕುರಡಗಿ, ನಾಗರಾಳ, ಡ.ಸ. ಹಡಗಲಿ, ಹೊಸಳ್ಳಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ. ಫಲಾನುಭವಿಗಳುಕೈಯಲ್ಲಿದ್ದ ಹಣವನ್ನು ವಿನಿಯೋಗಿಸಿ ಮನೆಗೆ ಅಡಿಪಾಯ ಹಾಕಿಕೊಂಡಿದ್ದಾರೆ.
ಗ್ರಾಪಂನವರು ಮನೆಯ ಜಿಪಿಎಸ್ ಮಾಡಿಕೊಂಡು ಹೋಗಿ ನಾಲ್ಕೈದು ತಿಂಗಳು ಕಳೆದಿವೆ. ಆದರೂ, ಇನ್ನೂವರೆಗೆ ಮೊದಲ ಹಂತದ ಬಿಲ್ ಕೂಡ ಬಂದಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಮನೆ ಕಟ್ಟುವ ಕಾರ್ಯ ಮುಂದುವರಿಸಲು ಆಗುತ್ತಿಲ್ಲ. ಹಲವು ಕಡೆ ಫೌಂಡೇಷನ್ ಹಂತಕ್ಕೆ ನಿಂತಿದೆ. ಕೆಲವರು ಅರ್ಧಕ್ಕೆ ಕಟ್ಟಿ ಸರ್ಕಾರದ ಅನುದಾನಕ್ಕಾಗಿ ಕಾಯುತ್ತ ಕುಳಿತಿದ್ದಾರೆ. ಇನ್ನೂ ಕೆಲವರಂತೂ ಹೊಸ ಮನೆ ಆಸೆ ಪಟ್ಟು ಇದ್ದ ಹಳೆಯ ಮನೆಯನ್ನು ತೆರವು ಮಾಡಿದ್ದಾರೆ. ಅಂತಹವರಿಗೆ ಈಗ ಹಳೆಯ ಮನೆಯೂ ಇಲ್ಲ. ಹೊಸ ಮನೆ ನಿರ್ಮಾಣ ಕೆಲಸವೂ ಆಗುತ್ತಿಲ್ಲ. ಸರ್ಕಾರದಿಂದ ಅನುದಾನ ಕೂಡ ಸರಿಯಾಗಿ ಬರುತ್ತಿಲ್ಲ.
ಒಂದು ಕಂತಿನ ಹಣವೂ ಬಂದಿಲ್ಲ: ನಿವೇಶನ, ಫೌಂಡೇಶನ್, ಗೋಡೆ, ಚಾವಣಿ ಹಾಗೂ ಪೂರ್ಣಗೊಂಡ ಮನೆ ಹೀಗೆ ನಾಲ್ಕು ಹಂತದಲ್ಲಿ ಮನೆಗಳ ಫೋಟೋ ತೆಗೆದು ಜಿಪಿಎಸ್ ಮಾಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಒಂದು ಮನೆಗೆ ಸರ್ಕಾರದಿಂದ 1.20 ಲಕ್ಷ ರೂ. ನೆರವು ಸಿಗುತ್ತದೆ. ಎಸ್‌ಟಿ, ಎಸ್‌ಸಿ ವರ್ಗದವರಿಗೆ ಒಂದು ಮನೆಗೆ ಸರ್ಕಾರದಿಂದ 1.50 ಲಕ್ಷ ರೂ. ನೆರವು ಹಾಗೂ ಪ್ರತಿಯೊಬ್ಬರಿಗೆ ಗ್ರಾಪಂ ಯೋಜನೆಯಾದ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ 22 ಸಾವಿರ ರೂ. ನೀಡಲಾಗುತ್ತದೆ. ಈ ಹಣ ನಾಲ್ಕು ಹಂತಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಹಣ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಫಲಾನುಭವಿಗಳು ಬ್ಯಾಂಕ್‌ಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ. ಆದರೆ, ನಾಲ್ಕು ತಿಂಗಳಿಂದ ಹಣ ಬಂದಿಲ್ಲ. ಈ ನಡುವೆ ಕೆಲ ಫಲಾನುಭವಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮನೆಗೆ ಹೋಗಿ ನಮಗೆ ಹಣ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಮನೆಯ ಬಿಲ್ ವಿಚಾರದಲ್ಲಿ ಫಲಾನುಭವಿಗಳು ಮನೆಗೆ ಬರುತ್ತಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ಮಂಜೂರು ಆಗಬೇಕು ಎಂದು ತಿಳಿ ಹೇಳುತ್ತಿದ್ದೇವೆ. ಆದರೆ, ಫಲಾನುಭವಿಗಳಿಗೆ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ಸರ್ಕಾರ ತಕ್ಷಣ ವಸತಿ ಯೋಜನೆಗಳಲ್ಲಿ ಮನೆಗಳನ್ನು ಕಟ್ಟುತ್ತಿರುವ ಬಡವರಿಗೆ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಮನೆ ನಿರ್ಮಾಣಕ್ಕೆ ಅನುಕೂಲ ಮಾಡಬೇಕು ಎಂದು ಅಬ್ಬಿಗೇರಿ ಗ್ರಾಪಂ ಸದಸ್ಯ ಶರಣಪ್ಪ ಗುಜಮಾಗಡಿ ಹೇಳಿದರು.
ಹೊಸ ಮನೆ ನಿರೀಕ್ಷೆಯಲ್ಲಿ ಹಳೆಯ ಮನೆ ಕಳೆದುಕೊಂಡು ಹೈರಾಣಾಗಿದ್ದೇವೆ. ಮನೆ ಕೆಲಸ ಅರ್ಧಕ್ಕೆ ನಿಂತಿದೆ. ಪೂರ್ತಿ ಕಟ್ಟಲುಹಣ ಇಲ್ಲ. ಸದ್ಯ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಮನೆ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬ ಚಿಂತೆ ಆರಂಭವಾಗಿದೆ.
ಫಲಾನುಭವಿಗಳು, ಅಬ್ಬಿಗೇರಿ ಗ್ರಾಮ.
-ಸಿಕಂದರ ಎಂ. ಆರಿ