Advertisement
ಕಾಸರಗೋಡು ಜಿಲ್ಲೆಯಿಂದ ಕೊಲ್ಲಿ ರಾಷ್ಟ್ರ ಸಹಿತ ವಿದೇಶದಲ್ಲಿ ಉದ್ಯೋಗಕ್ಕಾಗಿ ಹೋಗುವವರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಬೇಕೆಂದು ಹಲವು ವರ್ಷಗಳ ಬೇಡಿಕೆ ಹಾಗು ಹೋರಾಟದ ಫಲವಾಗಿ ಕೇಂದ್ರ ಸರಕಾರ ಮಂಜೂರು ಮಾಡಿದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಫೆಬ್ರವರಿ 28 ರಂದು ಉದ್ಘಾಟಿಸಲು ತೀರ್ಮಾನಿಸಲಾಗಿತ್ತು. ಕಾಸರಗೋಡು ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಕಟ್ಟಡದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಚೇರಿಯನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಪ್ರಾರಂಭಿಕ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ಸಾಕಷ್ಟು ಅನುದಾನ ಲಭಿಸದಿರುವುದರಿಂದಾಗಿ ಪಾಸ್‌ಪೋರ್ಟ್ ಕೇಂದ್ರ ತೆರೆಯಲು ವಿಳಂಬವಾಗುತ್ತಿದೆ.ಕೇಂದ್ರದಿಂದ ಅನುಮತಿ ಲಭಿಸಿದ್ದು ಕಾಸರಗೋಡಿನ ಅಂಚೆ ಕಚೇರಿಯ ಕಟ್ಟಡದ ಕೊಠಡಿಯನ್ನು ಇನ್ನೂ ವ್ಯವಸ್ಥಿತಗೊಳಿಸಲಾಗಿಲ್ಲ, ಮೊತ್ತ ಮಂಜೂರುಗೊಂಡಿಲ್ಲ. ಇದರಿಂದಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಚೇರಿ ಉದ್ಘಾಟನೆಗೆ ವಿಳಂಬವಾಗುತ್ತಿದೆ.
ಕಾಸರಗೋಡಿನ ಪ್ರಧಾನ ಅಂಚೆ ಕಚೇರಿ ಕಟ್ಟಡದಲ್ಲಿ ಆರಂಭಿಸಲು ಉದ್ದೇಶಿಸಿದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಲು ಅಗತ್ಯದ ಮೊತ್ತವನ್ನು ಮಂಜೂರು ಮಾಡುವಂತೆ ಕೇಂದ್ರ ಸರಕಾರದ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕೇಂದ್ರದ ಮುಖ್ಯ ಪಾಸ್‌ಪೋರ್ಟ್ ಅಧಿಕಾರಿಗೆ ಪತ್ರ ಬರೆದಿರುವುದಾಗಿ ಕಾಸರಗೋಡು ಸಂಸದ ಪಿ. ಕರುಣಾಕರನ್ ಅವರು ಹೇಳಿದ್ದಾರೆ. ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಸುಮಾರು 50 ಲಕ್ಷ ರೂ. ಮೊತ್ತ ಅನಿವಾರ್ಯವಾಗಿದ್ದು, ಈ ಮೊತ್ತವನ್ನು ಕಲ್ಲಿಕೋಟೆಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ನೀಡಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Related Articles
ಕಾಸರಗೋಡಿನ ಜನರು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದ ಹಾಗೂ ಹೋರಾಟ ಮಾಡಿದ್ದ ಕಾಸರಗೋಡು ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ಮಂಜೂರು ಮಾಡಿದೆ. ಆದರೆ ಕೇಂದ್ರದಲ್ಲಿ ದೀರ್ಘ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರಕಾರ ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಲು ಉತ್ಸಾಹ ತೋರಿಸಿರಲಿಲ್ಲ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆಗೆ ವಿಳಂಬವಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಭಟನೆಯ ಕೂಗು ಹೇಳಿಕೆ ನೀಡುತ್ತಿರುವುದು ಖಂಡನೀಯ. ಯುಪಿಎ ಸರಕಾರಕ್ಕೆ ಸಾಧ್ಯವಾಗದ ಕೆಲಸವನ್ನು ಎನ್‌ಡಿಎ ಸರಕಾರ ಮಂಜೂರು ಮಾಡಿದೆ. ಈ ಹಿನ್ನೆಲೆ ಯಲ್ಲಿ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಅವರಿಗೆ ಪ್ರತಿಭಟನೆಯ ಹೇಳಿಕೆ ನೀಡಲು ನೈತಿಕ ಹಕ್ಕಿಲ್ಲ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಹೇಳಿದ್ದಾರೆ.
Advertisement
ಕಚೇರಿಗಾಗಿ ಹೋರಾಟ ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಲು ವಿಳಂಬ ವಾಗುತ್ತಿರುವುದನ್ನು ಖಂಡಿಸಿ ಈಗಾಗಲೇ ವಿವಿಧ ಸಂಘಟನೆಗಳು ಹೋರಾಟದ ಹಾದಿ ಹಿಡಿದಿವೆ. ದೀರ್ಘಕಾಲದ ಬೇಡಿಕೆಯಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಾಸರಗೋಡಿನಲ್ಲಿ ಆರಂಭಿಸುವ ವಿಷಯದಲ್ಲಿ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರ ಜಿಲ್ಲೆಯ ಜನರನ್ನು ವಂಚಿಸಿವೆ ಎಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಆರೋಪಿಸಿದ್ದಾರೆ. ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಲು ಅನುಮತಿ ನೀಡಿ ಕೇವಲ ಉದ್ಘಾಟನೆಗಾಗಿ ದಿನ ನಿಗದಿಯಾಗಿತ್ತು. ಆದರೆ ಆ ದಿನದಂದು ಉದ್ಘಾಟನೆ ಸಾಧ್ಯವಾಗಿಲ್ಲ. ಅಲ್ಲದೆ ಈ ಕೇಂದ್ರಕ್ಕೆ ಅಗತ್ಯದ ಮೊತ್ತ ಹಾಗೂ ಉಪಕರಣಗಳನ್ನು ನೀಡಿಲ್ಲ ಎಂದು ಆರೋಪಿಸಿರುವ ಹಕೀಂ ಕುನ್ನಿಲ್ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆಗೆ ವಿಳಂಬವಾಗುತ್ತಿರುವುದರಿಂದ ಡಿಸಿಸಿ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಹಕೀಂ ಮುನ್ನೆಚ್ಚರಿಕೆ ನೀಡಿದ್ದಾರೆ.