Advertisement
ಸುಳ್ಯ ತಾಲೂಕಿನ 3ನೇ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 16ನೇ ಪೊಲೀಸ್ ಠಾಣೆಯಾಗಿ 2016ರ ಸ್ವಾತಂತ್ರ್ಯ ದಿನದಂದು ಬೆಳ್ಳಾರೆಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಿತು. ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೊರಠಾಣೆಯನ್ನು ಪೂರ್ಣಪ್ರಮಾಣದ ಪೋಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕೆಲವೇ ಕೆಲವು ತಿಂಗಳಿನಲ್ಲಿ ಠಾಣೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವುದಾಗಿ ನೀಡಿದ್ದ ಅಧಿಕಾರಿ ವರ್ಗದ ಭರವಸೆ ಮರಿಚಿಕೆಯಾಗಿದೆ.
ಕೇವಲ ಎರಡು ಚಿಕ್ಕ ಕೊಠಡಿ ಹಾಗೂ ಒಂದು ಹಾಲ್ ಇರುವ ಹೊರಠಾಣೆ ಕಟ್ಟಡವನ್ನೇ ಪೂರ್ಣ ಪ್ರಮಾಣದ ಠಾಣೆಗೆ ಮೇಲ್ದರ್ಜೆ ನೀಡಿ ಪರಿವರ್ತಿಸಲಾಗಿದೆ. ಸ್ಥಳದ ಕೊರತೆಯೇ ಠಾಣೆಯ ಬಹುದೊಡ್ಡ ಸಮಸ್ಯೆ. ಈ ಹಿಂದೆ ಐದು ಮಂದಿಗೆಂದು ನಿರ್ಮಿಸಲಾದ ಹೊರಠಾಣೆಯ ಕಟ್ಟಡದಲ್ಲಿ ಇದೀಗ ಬರೋಬ್ಬರಿ 31 ಮಂದಿ ಇರಬೇಕಾದ ಅನಿವಾರ್ಯತೆ. ಪೊಲೀಸ್ ಅಧಿಕಾರಿ ಹಾಗೂ ಸಿಬಂದಿ ಕುಳಿತುಕೊಳ್ಳಲು ಬಿಡಿ, ನೆಟ್ಟಗೆ ನಿಲ್ಲಲೂ ಠಾಣೆಯಲ್ಲಿ ಜಾಗವಿಲ್ಲ. ಕೆಲಸ – ಕಾರ್ಯಗಳಿಗೆಂದು ಬರುವ ಸಾರ್ವಜನಿಕರಿಗೂ ಸ್ಥಳಾವಕಾಶವಿಲ್ಲ. ಹೀಗಾಗಿ, ಬೆಳ್ಳಾರೆ ಠಾಣೆ ಮಿನಿ ಸಂತೆಯಂತೆ ಗೋಚರಿಸುತ್ತಿದೆ. ಕಂಪ್ಯೂಟರ್ ಸಹಿತ ಪೀಠೊಪಕರಣಗಳನ್ನು ಜೋಡಿಸಿ ಇಡುವುದು ಹೇಗೆ ಎಂಬ ಚಿಂತೆ ಸಿಬಂದೆ. ಶಸ್ತ್ರಾಸ್ತ್ರಗಳನ್ನು ಭದ್ರವಾಗಿಡಲು ಸಾಧ್ಯವಿಲ್ಲದಷ್ಟು ಇಕ್ಕಟ್ಟಾಗಿದೆ ಠಾಣೆಯ ಕಟ್ಟಡ. ಪೊಲೀಸ್ ಠಾಣೆ ನಿರ್ಮಿಸಲೆಂದು 70 ಸೆಂಟ್ಸ್ ಜಾಗವನ್ನು ಈ ಹಿಂದೆಯೇ ಕಾದಿರಿಸಲಾಗಿದ್ದು, ಆದರೆ ಇದುವರೆಗೂ ಕಟ್ಟಡ ಮಾತ್ರ ಮಂಜೂರುಗೊಂಡಿಲ್ಲ. ಪದೇ ಪದೇ ಕೆಡುವ ಸರಕಾರಿ ವಾಹನ
ಠಾಣೆಯನ್ನು ಮೇಲ್ದರ್ಜೆಗೆ ಏರಿ ಸಿದ್ದ ಸಂದರ್ಭದಲ್ಲಿ ಸರಕಾರದಿಂದ ನೀಡಲಾಗಿದ್ದ ವಾಹನ ಆಗಾಗ ಕೆಟ್ಟು ನಿಲ್ಲುತ್ತಿದ್ದು, ಬಹುಪಾಲು ಗ್ಯಾರೇಜಿನಲ್ಲೇ ಇರುವಂತಾಗಿದೆ. ತುರ್ತು ಸಂದರ್ಭದಲ್ಲಿ, ರೌಂಡ್ಸ್ ಸಮಯದಲ್ಲಿ ತೊಂದರೆಯಾಗುತ್ತಿದೆ. ಠಾಣೆಗೆ ಹೊಸ ವಾಹನ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
Related Articles
ಒಬ್ಬ ಎಸ್‌ಐ, 5 ಎಎಸ್‌ಐ, 9 ಹೆಡ್ ಕಾನ್‌ಸ್ಟೆàಬಲ್, 21 ಕಾನ್‌ಸ್ಟೇಬಲ್ ಸಹಿತ ಬೆಳ್ಳಾರೆ ಠಾಣೆಯಲ್ಲಿ ಇರುವ ಹುದ್ದೆಗಳ ಸಂಖ್ಯೆ 36. ಐದು ಪಿಸಿಗಳ ಹುದ್ದೆಗನ್ನು ಹೊರತುಪಡಿಸಿ ಉಳಿದೆಲ್ಲವೂ ಭರ್ತಿಯಾಗಿವೆ. ಹಾವೇರಿ, ವಿಜಯಪುರ, ದಾವಣಗೆರೆ, ಬೆಳಗಾವಿ ಹೀಗೆ ದೂರದ ಊರುಗಳಿಂದ ನಿಯೋಜನೆಗೊಂಡ ಸಿಬಂದಿಯೇ ಜಾಸ್ತಿ ಇದ್ದಾರೆ. ಅವರಿಗೆ ಬೆಳ್ಳಾರೆ ಆಸುಪಾಸಿನಲ್ಲಿ ಹೆಚ್ಚಿನ ಬಾಡಿಗೆ ಮನೆ, ಸರಕಾರಿ ವಸತಿಗಳು ಲಭ್ಯವಿಲ್ಲದ ಕಾರಣ ಸುಬ್ರಹ್ಮಣ್ಯ, ಪುತ್ತೂರು, ಸುಳ್ಯದಂತಹ ದೂರದ ಊರುಗಳಲ್ಲಿ ಉಳಿದುಕೊಂಡು ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಠಾಣೆಯಲ್ಲಿ ಸರಿಯಾದ ಶೌಚಾಲಯವಿಲ್ಲ, ವಿಶ್ರಾಂತಿ ಕೊಠಡಿಯಿಲ್ಲ. ಇರುವ ಕೊಠಡಿಯಲ್ಲೇ ಆಹಾರ ತಯಾರಿಸುವ ಪರಿಸ್ಥಿತಿ ಇಲ್ಲಿದೆ. ಪೋಲೀಸರ ವಸತಿಗೃಹಕ್ಕಾಗಿ ಅನೇಕ ಮನವಿಗಳನ್ನು ಇಟ್ಟಿದ್ದರೂ ಕಡತಗಳು ವಿಲೇವಾರಿಯಾಗಲೂ ಮೀನ-ಮೇಷ ಎಣಿಸಲಾಗುತ್ತಿದೆ.
Advertisement
ಲಾಕಪ್ ಇಲ್ಲದ ಠಾಣೆ ಎಲ್ಲ ಕಡೆಯೂ ಪೊಲೀಸ್ ಠಾಣೆಗಳಲ್ಲಿ ಲಾಕಪ್ ಇದ್ದೇ ಇರುತ್ತದೆ. ಆದರೆ, ಬೆಳ್ಳಾರೆ ಠಾಣೆಯಲ್ಲಿ ಆ ವ್ಯವಸ್ಥೆ ಇಲ್ಲ. ಲಾಕಪ್ ಗಳಿಗಾಗಿ ಬೇರೆ ಠಾಣೆಗಳನ್ನು ಅವಲಂಬಿಸಬೇಕಾಗಿದೆ. ಬೇರೆ ಠಾಣೆಗಳಲ್ಲಿ ಲಾಕಪ್‌ಗ್ಳು ಖಾಲಿ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಸಾಕ್ಷ್ಯದ ವಸ್ತುಗಳು, ಅಪಘಾತಗೊಂಡ ವಾಹನಗಳು ಹಾಗೂ ಸಿಬಂದಿಯ ವಾಹನಗಳನ್ನ ಠಾಣೆಯ ಆವರಣದಲ್ಲಿ ಇಡಲೂ ಜಾಗವಿಲ್ಲದಂತಾಗಿದೆ. ಬಾಲಚಂದ್ರ ಕೋಟೆ