Advertisement

ದೇಶದ ಮೊದಲ ಎಸಿ ರೈಲು ನಿಲ್ದಾಣಕ್ಕೆ ಸಾಲದು ಸೌಲಭ್ಯ

12:12 PM Jun 26, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ ಬೈಯಪ್ಪನ ಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಪ್ರವೇಶಿಸಿದರೆ ವಿಮಾನ ನಿಲ್ದಾಣಕ್ಕೆ ಹೋದ ಅನುಭವ ಆಗಲಿದೆಯಾದರೂ ಮೂಲ ಉದ್ದೇಶ ಈಡೇರಬೇಕಾದರೆ ಮತ್ತಷ್ಟು ಸೌಲಭ್ಯ ಕಲ್ಪಿಸಬೇಕಾಗಿದೆ.

Advertisement

ನೂತನ ಹೈಟೆಕ್‌ ಟರ್ಮಿನಲ್‌ನಿಂದ ದಟ್ಟಣೆ ನಿವಾರಣೆಯಾಗಿದೆ. ಪ್ರಯಾಣಿಕರಿಗೆ ಉಪಯೋಗವೂ ಇದರಿಂದಾಗಿದೆ. ಆದರೆ, ಅಲ್ಲಿಂದ ತಲುಪಬೇಕಾದ ಸ್ಥಳಗಳಿಗೆ ಹೋಗಲು ಸಂಪರ್ಕ ಸಾರಿಗೆ ವ್ಯವಸ್ಥೆ ಇನ್ನೂ ಆಗಿಲ್ಲ. ಇಡೀ ಟರ್ಮಿನಲ್‌ಗೆ ಒಂದೇ ಪ್ರವೇಶ ದ್ವಾರ ಇದ್ದು, ಇದೇ ಭಾಗದಿಂದ ನಿರ್ಗಮನ ಮತ್ತು ಆಗಮನದಿಂದ ಸುತ್ತುವರಿದು ಬರುವಂತಾಗಿದೆ. ಜತೆಗೆ, ಇಲ್ಲಿಗೆ ಬಂದಿಳಿದವರು ಮುಖ್ಯರಸ್ತೆಗೆ ತೆರಳಲು ಅಥವಾ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಹೋಗಲು ಸಮರ್ಪಕ ಸಂಪರ್ಕ ಸಾರಿಗೆ ಸೇವೆಗಳಿಲ್ಲ. ಇದ್ದರೂ ಕೆಲವು ಸೀಮಿತ ಪ್ರದೇಶಗಳಿಂದ ಮಾತ್ರ ಕಲ್ಪಿಸಲಾಗಿದೆ. ಇದರಿಂದ ಮಹಿಳೆಯರು, ವೃದ್ಧರು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಈ ಮಧ್ಯೆ ವೈಟ್‌ ಫೀಲ್ಡ್‌ನಲ್ಲಿ ಸಾಕಷ್ಟು ಜನ ಕೆಲಸ ಮಾಡುವುದರಿಂದ ವೈಟ್‌ ಫೀಲ್ಡ್‌-ಬೈಯಪ್ಪನಹಳ್ಳಿ-ಯಶವಂತಪುರ ನಡುವೆ “ದಟ್ಟಣೆ ಅವಧಿ’ಯಲ್ಲಿ ಶೆಟಲ್‌ ಸೇವೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂಬ ಬೇಡಿಕೆಯೂ ಇದೆ.

ಸುಮಾರು 10 ಎಕರೆ ಪ್ರದೇಶದಲ್ಲಿ ಈ ಟರ್ಮಿನಲ್‌ ನಿರ್ಮಿಸಲಾಗಿದ್ದು, ಒಟ್ಟು 7 ಫ್ಲಾಟ್‌ ಫಾರಂಗಳನ್ನು ಹೊಂದಿದೆ. ಇದರ ಮೇಲ್ಛಾವಣಿಯೇ ಸುಮಾರು 40 ಸಾವಿರ ಚದರ ಮೀಟರ್‌ ಹೊಂದಿದೆ. ಈ ಟರ್ಮಿನಲ್‌ ನಿರ್ಮಾಣಕ್ಕೆ ತಗುಲಿದ ಖರ್ಚು ಸರಿಸುಮಾರು 340 ಕೋಟಿ ರೂ. ಸದ್ಯ ಬೆರಳೆಣಿಕೆಯಷ್ಟು ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದು, ವರ್ಷಾಂತ್ಯಕ್ಕೆ ಇವುಗಳ ಸಂಖ್ಯೆ 25ಕ್ಕೆ ಹೆಚ್ಚಲಿದೆ. ಆಗ, ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಮತ್ತೂಂದು ಪ್ರವೇಶ ದ್ವಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಟರ್ಮಿನಲ್‌ನಲ್ಲಿ ಮತ್ತೂಂದು ಪ್ರವೇಶದ್ವಾರಕ್ಕಾಗಿ ಭೂಮಿಯ ಅಗತ್ಯವಿದ್ದು, ರಾಜ್ಯ ಸರ್ಕಾರದ ಆನುಮತಿ ಅಗತ್ಯ. ಈಗ ಪ್ರಯಾಣಿಕರಿಂದ ಬೇಡಿಕೆ ಬಂದರೆ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ತಿಳಿಸುತ್ತಾರೆ. ಅದೇ ರೀತಿ, ರೈಲು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದ ನಡುವೆ ಸುಮಾರು 1.7 ಕಿ.ಮೀ. ಅಂತರವಿದ್ದು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಹೆಚ್ಚು ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ನೆರವು ಬೇಕಾಗಿದೆ. ಶೆಟಲ್‌ ರೈಲು ಸೇವೆಗಳನ್ನೂ ಪರಿಚಯಿಸಬಹುದು. ಆದರೆ, ಇದೆಲ್ಲವೂ ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿದೆ ಎಂದೂ ಅವರು ಹೇಳುತ್ತಾರೆ. ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಿಂದ ವಿವಿಧ ಮಾರ್ಗವಾಗಿ ಹತ್ತು ಬಿಎಂಟಿಸಿ ಫೀಡರ್‌ ಬಸ್‌ಗಳನ್ನು ಆಯೋಜಿಸಲಾಗಿದೆ. ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಚನ್ನಸಂದ್ರ, ಸೆಂಟ್ರಲ್‌ ಸಿಲ್ಕ್ ಬೋರ್ಡ್‌, ನಾಗವಾರ ಮತ್ತು ಮುನೆಕೊಳಲು ಕ್ರಾಸ್‌/ಸ್ಟೈಸ್‌ ಗಾರ್ಡನ್‌ಗೆ ಮಾತ್ರ ಫೀಡರ್‌ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಸದ್ಯಕ್ಕೆ ರೈಲುಗಳ ಸಮಯಕ್ಕೆ ಮಾತ್ರ ಕೆಲವು ಬಸ್‌ಗಳು ಸಂಚರಿಸುತ್ತಿವೆ.

ನಿಲ್ದಾಣದಲ್ಲಿ ಸೌಲಭ್ಯಗಳು: ಪುಡ್‌ಕೋರ್ಟ್‌, ವಾಹನ ನಿಲುಗಡೆಗೆ ವಿಶಾಲವಾದ ಸ್ಥಳ, ಪ್ರಯಾಣಿಕರು ಕೂರಲು ಕುರ್ಚಿಗಳು, ಕುರ್ಚಿಗಳ ಬಳಿಯೇ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ಗಳು, ಕುಡಿಯುವ ನೀರಿನ ವ್ಯವಸ್ಥೆ, ಎಟಿಎಂ ಮಷಿನ್‌ಗಳು ಹಾಗೂ ಎಸ್ಕಲೇ ಟರ್‌, ಲಿಫ್ಟ್ ಮತ್ತು ಮೆಟ್ಟಿಲು ಗಳನ್ನೂ ಕಾಣಬಹುದು. ಇವೆಲ್ಲದಕ್ಕಿಂತ ಮುಖ್ಯವಾಗಿ ಇಡೀ ನಿಲ್ದಾಣವೇ ಹವಾ ನಿಯಂತ್ರಿತವಾಗಿದೆ.

Advertisement

ಸಂಚರಿಸುತ್ತಿರುವ ರೈಲುಗಳು : ಎಸ್‌ಎಂವಿಬಿ-ಎರ್ನಾಕುಲಂ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12684), ಎಸ್‌ಎಂವಿಬಿ- ಕೊಚುವೇಲ್ಲಿ (ರೈಲು ಸಂಖ್ಯೆ 16320) ಮತ್ತು ಎಸ್‌ಎಂವಿಬಿ- ಪಾಟ್ನಾ ಸಾಪ್ತಾಹಿಕ ಹಮ್ಸ್‌ಫ‌ರ್‌ ಎಕ್ಸ್‌ಪ್ರೆಸ್‌(ರೈಲು ಸಂಖ್ಯೆ-22354) ಈ ಮೂರು ಎಕ್ಸ್‌ಪ್ರೆಸ್‌ ರೈಲುಗಳ ಜತೆಗೆ ಒಂದು ಬಂಗಾರಪೇಟೆಗೆ ಹೋಗುವ ಮೆಮು ಎಕ್ಸ್‌ ಪ್ರಸ್‌(ರೈಲು ಸಂಖ್ಯೆ-06527/06528) ಸಂಚರಿಸುತ್ತಿವೆ. ಬೈಯಪ್ಪಹಳ್ಳಿ ನಿಲ್ದಾಣದಿಂದ ಪ್ರತಿದಿನ ಅಂದಾಜು 1,100 ಜನ ಪ್ರಯಾಣಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೊಂಕಣ ಸುತ್ತಿ ಮೈಲಾರಕ್ಕೆ : ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾನಗರ, ಹಲಸೂರು ಮುಂತಾದ ಸ್ಥಳಗಳಿಂದ ಬರುವ ಪ್ರಯಾಣಿಕರಿಗೆ ಸರಿಯಾದ ಬಸ್‌ ಅಥವಾ ಮೆಟ್ರೋ ವ್ಯವಸ್ಥೆ ಇಲ್ಲ. ಪ್ರಯಾಣಿಕರು ಬಿಎಂಟಿಸಿಯ ಕೆಲವು μàಡರ್‌ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಈ ಬಸ್‌ಗಳು ತಪ್ಪಿದರೆ ಆಟೋಗಳಿಗಾಗಿ ಮೊರೆ ಹೋಗಬೇಕು. ಮತ್ತೂಂದೆಡೆ ಪಕ್ಕದಲ್ಲಿರುವ ಕಸ್ತೂರಿ ನಗರ, ರಾಮಮೂರ್ತಿ ನಗರ, ಬಾಣಸವಾಡಿ ಮಾರ್ಗದ ಪ್ರಯಾಣಿಕರೂ ಬೆನ್ನಿಗಾನಹಳ್ಳಿ ಮೂಲಕವೇ ಸುತ್ತುವರೆದು ಹೋಗಬೇಕು ಎಂದು ಪ್ರಯಾಣಿಕರು ಹೇಳುತ್ತಾರೆ.

ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ಬಂದು ಬೆಳಗಿನ ಜಾವ 4 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬಂದಿಳಿದೆವು. ಅಲ್ಲಿಂದ ಲಿಂಗರಾಜಪುರಂಗೆ ಹೋಗಬೇಕು. ಆದರೆ, ಸರ್‌ ಎಂ.ವಿ. ಟರ್ಮಿನಲ್‌ನಿಂದ ನೇರ ಬಸ್‌ ವ್ಯವಸ್ಥೆಯಿಲ್ಲ. ಲಗೇಜ್‌ ಮತ್ತು ಮಕ್ಕಳನ್ನು ಕರೆದುಕೊಂಡು ಮೆಟ್ರೋ, ಬಸ್‌ ಎಂದು ಸುತ್ತಾಕಿ ಹೋಗುವುದು ಕಷ್ಟವಾಗುತ್ತದೆ.ಗಿರಿಜಮ್ಮ, ಪ್ರಯಾಣಿಕರು

 

ಭಾರತಿ ಸಜ್ಜನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next