ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯಲ್ಲೇ ಹೆಚ್ಚು ಪ್ರವಾಸಿ ತಾಣಗಳ ಹೊಂದಿರುವ ಶ್ರೀರಂಗಪಟ್ಟಣಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಐತಿಹಾಸಿಕ ನಗರಿ, ಪ್ರವಾಸಿ ತಾಣಗಳ ಕಣಜವಾದ ಶ್ರೀರಂಗಪಟ್ಟ ಣಕ್ಕೆ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವುದೇ ಜನಪ್ರತಿನಿಧಿಗಳಿಗೆ ಸವಾಲಾಗುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಕೊರೊನಾ ಹಿನ್ನೆಲೆ ಪ್ರವಾಸ ಮಾಡಲು ಸರ್ಕಾರ ನಿರ್ಬಂಧಿಸಿತ್ತು. ಇದೀಗ ಕೊರೊನಾ ದೂರವಾಗಿ ಕಳೆದ ವರ್ಷದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲ ಭಕ್ತರಿಗೆ ಶ್ರದ್ಧಾ ಕೇಂದ್ರವೂ ಹೌದು, ಪ್ರವಾಸಿಗರಿಗೆ ಪ್ರವಾಸಿ ತಾಣವೂ ಹೌದು. ಇದರಂತೆ ಗಂಜಾಂ ನಿಮಿಷಾಂಬ ದೇವಾಲ ಯವೂ ಅದೇ ರೀತಿ ಇದೆ. ಪಟ್ಟಣದ ಸುತ್ತಲು ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಸೇರಿದಂತೆ ನದಿ ತೀರದ ಪ್ರವಾಸಿ ತಾಣಗಳಾದ ಗೋಸಾಯಿಘಾಟ್, ಕಾವೇರಿ ಸಂಗಮ, ಪಶ್ಚಿಮವಾಹಿನಿ, ಟಿಪ್ಪು ಬೇಸಿಗೆ ಅರಮನೆ, ಟಿಪ್ಪು ಸಮಾಧಿ, ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಎಡಮುರಿ ಕ್ಷೇತ್ರಗಳಿಗೆ ವಿವಿಧ ರಾಜ್ಯದ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಪ್ರತಿ ದಿನ ಆಗಮಿಸುತ್ತಿದ್ದು, ಈ ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಶಾಸಕರಿಗೆ ಸವಾಲಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌಲಭ್ಯ ಕಲ್ಪಿಸಿಲ್ಲ ಪ್ರವಾಸೋದ್ಯಮ ಇಲಾಖೆ: ಶಾಲೆ, ಕಾಲೇಜು ರಜೆ ಹಿನ್ನೆಲೆಯಲ್ಲಿ ಬೇಸಿಗೆ ರಜಾ ಕಳೆಯಲು ಮಕ್ಕಳೊಂದಿಗೆ ಪೋಷಕರು ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲು ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಐತಿಹಾಸಿಕ, ಪುರಾಣ ಪ್ರಸಿದ್ಧ ಸ್ಥಳಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ರಸ್ತೆ, ವಿಶ್ರಾಂತಿ ತಾಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಹಲವು ಹೋರಾಟಗಾರರು ಅಧಿಕಾರಿಗಳ ಕಚೇರಿಗೆ ಅಲೆದು ಮನವಿ ಮತ್ತು ದೂರುಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.
Related Articles
ವ್ಯಾಪಾರಸ್ಥರಿಗೆ ಸೂಕ್ತ ಸ್ಥಳವಿಲ್ಲ: ಪ್ರವಾಸಿ ತಾಣಗಳ ಬಳಿ ವ್ಯಾಪಾರ, ವಹಿವಾಟುಗಳ ನಡೆಸಿ ಜೀವನ ಸಾಗಿಸಲು ಇಲ್ಲಿನ ವ್ಯಾಪಾರಸ್ಥರಿಗೆ ಸೂಕ್ತವಾದ ಸ್ಥಳ ನೀಡಿಲ್ಲ. ಎಲ್ಲೆಂದರಲ್ಲಿ ಅಂಗಡಿ ಮುಂಗಟ್ಟುಗಳನ್ನಿಟ್ಟು ವ್ಯಾಪಾರ ಮಾಡುವುದನ್ನು ತಪ್ಪಿಸಿ, ಸೂಕ್ತ ಜಾಗಗಳ ಗುರುತಿಸಬೇಕಿದೆ. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿ ಸಿಲ್ಲ. ಮೊದಲು ಆ ವ್ಯವಸ್ಥೆಗೆ ಮುಂದಾಗಬೇಕು. ಶುದ್ಧ ನೀರಿನ ಘಟಕಗಳನ್ನು ದೇಗುಲ ಸೇರಿದಂತೆ ಪ್ರವಾಸಿ ತಾಣಗಳ ಬಳಿ ನಿರ್ಮಿಸಬೇಕು. ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ತಪ್ಪಿಸಿ, ವ್ಯಾಪಾರವನ್ನೇ ನಂಬಿ ಬದುಕುವ ಸ್ಥಳೀಯರಿಗೆ ಸೌಲಭ್ಯಗಳನ್ನು ಹೆಚ್ಚಿಸಿ, ಈ ಸಮಸ್ಯೆಯಿಂದ ದೂರಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಅಭಿವೃದ್ಧಿಗೆ ಅನುದಾನದ ಕೊರತೆ: ಪ್ರವಾಸಿ ತಾಣ ಗಳ ಅಭಿವೃದ್ಧಿಗೆ ಹಿಂದಿನ ಸರ್ಕಾರದಲ್ಲಿ ಪೂರಕವಾದ ವ್ಯವಸ್ಥೆ ದೊರೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಸರ್ಕಾರಿ ಅನುದಾನದ ಕೊರತೆಯಿಂದ ಪ್ರವಾಸಿ ತಾಣಗಳ ಅಭಿವೃದ್ಧಿ ಕಂಡಿಲ್ಲ. ಈಗಿನ ನೂತನ ಸರ್ಕಾರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿ, ಈ ಭಾಗದಲ್ಲಿ ಅಂಗಡಿ ಮುಂಗಟ್ಟುಗಳ ನಿಟ್ಟು ವ್ಯಾಪಾರ ಮಾಡುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಆಶಾ ಕಿರಣ ಬದುಕಿಗೆ ನೆರವಾಗಲು ಸ್ಥಳೀಯ ಶಾಸಕರು ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಭವನ ನಿರ್ಮಾಣ ಮಾಡಿ: ಪ್ರತಿಯೊಂದು ಪ್ರವಾಸಿ ತಾಣಗಳಿಗೆ ಸೂಕ್ತವಾದ ರಸ್ತೆ, ಮಳೆ ಗಾಳಿಗೆ ಪ್ರವಾಸಿಗರು ಸಿಲುಲದಂತೆ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರು ಒಂದೆರಡು ದಿನ ಉಳಿದುಕೊಳ್ಳಲು ಭವನ ರೂಪದಲ್ಲಿ ಕಟ್ಟಣ ನಿರ್ಮಿಸಿ, ಅದಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ದೂರದ ಊರುಗಳಿಂದ ಬಂದ ಪ್ರವಾಸಿಗರಿಗೆ ಅನುಕೂಲ ಮಾಡಬೇಕಾಗಿದೆ.
ನಿತ್ಯ ನರಕಯಾತನೆ ತಪ್ಪಿಸಿ: ಕೆಲ ಸಣ್ಣ-ಪುಟ್ಟ ಸೌಲಭ್ಯಗಳನ್ನು ಹೊರತುಪಡಿಸಿದರೆ, ಮೂಲ ಸೌಲಭ್ಯಗಳಿಲ್ಲದೆ ಭಕ್ತರು ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ದೇಗುಲಕ್ಕೆ ಬರುವ ಭಕ್ತರು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರವಾಸಿಗರು ಹಾಗೂ ಭಕ್ತರು ದೇವರಲ್ಲಿ ಮೊರೆಯಿಡುವಂತಾಗಿದೆ. ಪ್ರವಾಸಿಗರಿಂದ ದೇಗುಲ ಹಾಗೂ ಪ್ರವೇಶ ಶುಲ್ಕದಿಂದ ಖಜಾನೆಗೆ ಭಕ್ತರಿಂದ ವರ್ಷಕ್ಕೆ ಕೋಟಿ ಕೋಟಿ ರೂ.ಹರಿದು ಬರುತ್ತಿದ್ದರೂ, ಪ್ರವಾಸಿಗರು ಹಾಗೂ ಭಕ್ತರ ಸಂಕಷ್ಟ ದೂರವಾಗುತ್ತಿಲ್ಲ. ದೂರದೂರಿನಿಂದ ಬರುವ ಭಕ್ತರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಸೂಕ್ತ ನೆಲೆಯಿಲ್ಲ. ವಾಹನ ನಿಲ್ಲಿಸಲು ಸ್ಥಳವಿಲ್ಲ. ಅಡುಗೆ ಮಾಡಿಕೊಳ್ಳಲು ದೇಗುಲದ ಆವರಣದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ದೇಗುಲದ ಆವರಣದಲ್ಲೇ ವಾಹನ ದೀಪದಿಂದ ಅಡುಗೆ ತಯಾರಿಸುವುದು, ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಕತ್ತಲಲ್ಲಿ ಮಲುಗುವುದು, ಆವರಣದಲ್ಲೇ ಬಟ್ಟೆ ಒಣಗಿಸುವುದು ಪ್ರವಾಸಿಗರು ಅನುಭವಿಸುತ್ತಿರುವ ನಿತ್ಯ ನರಕಯಾತನೆ ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನ್ನದಾಸೋಹ ಮುಂದುವರಿಸಿ: ಶ್ರೀರಂಗಪಟ್ಟಣ ಗಂಜಾಂ ಶ್ರೀನಿಮಿಷಾಂಬ ದೇವಾಲಯದಲ್ಲಿ ಮಾತ್ರ ವಾರಕ್ಕೆ ಮೂರು ದಿನಗಳು ಒಂದು ಹೊತ್ತಿನ ಅನ್ನದಾಸೋಹ ನಡೆಯುತ್ತಿದೆ. ಈ ವ್ಯವಸ್ಥೆ ಪ್ರತಿ ದೇವಾಲಯ ದಲ್ಲಿ ಪ್ರಸಾದ ರೂಪದಲ್ಲಿ ಉಪಹಾರ ದಿನಕ್ಕೆ ಎರಡು ಬಾರಿಯಾದರೂ ನೀಡಬೇಕು. ಪ್ರವಾಸಿ ಭವನಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ರಾಜ್ಯದ ಬೇರೇ ದೇವಾಲಯಗಳಲ್ಲಿ ನೀಡಿದಂತೆ ಭಕ್ತರಿಗೆ ಪ್ರತಿ ದಿನ ಅನ್ನ ದಾಸೋಹ ನಡೆಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ಅಭಿವೃದ್ಧಿಗೆ ಅಡ್ಡಿ: ಶ್ರೀರಂಗನಾಥ ದೇವಾಲಯ ಹಾಗೂ ಇತರೆ ಪ್ರವಾಸಿ ತಾಣಗಳ ನಿರ್ವಹಣೆ ಕೇಂದ್ರ ಹಾಗೂ ಪುರಾತತ್ವ ಇಲಾಖೆಯದ್ದಾಗಿದ್ದು, ದೇವಾಲ ಯದ ನಿರ್ವಹಣ ರಾಜ್ಯ ಪುರಾತತ್ವ(ಧಾರ್ಮಿಕ ದತ್ತಿ) ಇಲಾಖೆಯದ್ದಾಗಿದೆ. ಹಲವು ವರ್ಷಗಳ ಹಿಂದೆಯೇ ಭಕ್ತರ ಅನುಕೂಲಕ್ಕಾಗಿ ಪ್ರವಾಸಿ ತಾಣ ಹಾಗೂ ದೇವಾಲಯಗಳ ಆವರಣದಲ್ಲಿ ವಿಶ್ರಾಂತಿ ಗೃಹ, ಅನ್ನ ದಾಸೋಹ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರೆ ಅನುಕೂಲ ಕಲ್ಪಿಸಲು ಹಿಂದಿನ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗುದ್ದಲಿಪೂಜೆ ನಡೆಸಿದ್ದರಾದರೂ, ಸಾಕಾರಗೊಳ್ಳಲು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರು, ಭಕ್ತರ ಸಂಕಷ್ಟ ನೀಗಿಸಲು ಮತ್ತು ಅಭಿವೃದ್ಧಿಯತ್ತ ಸಾಗಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಜುರಾಯಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರೊಂದಿಗೆ ಚರ್ಚೆ ಮಾಡಿ, ಯಾವ ರೂಪದಲ್ಲಿ ಸಿಕುವ ಅನು ದಾನಗಳ ಬಳಕೆ ಮಾಡಿಕೊಳ್ಳಲಾಗುತ್ತದೆ. ಬರುವ ಭಕ್ತರಿಗೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳುವ ಪ್ರಮಾಣಿಕ ಪ್ರಯತ್ನ ಮಾಡುವೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಹಲವು ಪಾರಂಪರಿಕ ಪ್ರವಾಸಿತಾಣಗಳಿದ್ದು, ಪ್ರವಾಸಿಗರ ಮೂಲ ಸೌಲಭ್ಯ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.
– ಗಂಜಾಂ ಮಂಜು