ಹುಬ್ಬಳ್ಳಿ: ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಒಂದೇ ಒಂದು ದೋಣಿ ಇಲ್ಲದಂತಾಗಿದ್ದು, ತುರ್ತು ಕಾರ್ಯಾಚರಣೆಗೆ ಪಕ್ಕದ ಜಿಲ್ಲೆ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಉಂಟಾಗಿದೆ.
ಪ್ರವಾಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಪ್ರಾಣದ ಹಂಗು ತೊರೆದು ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳೇ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಉಂಟಾಗಿರುವ ನೆರೆಯಲ್ಲಿ ಅಗ್ನಿಶಾಮಕ ದಳ ಇಲಾಖೆಯ ವಾಸ್ತವತೆ ಬಯಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ನವಲಗುಂದ, ಕಲಘಟಗಿ ಹಾಗೂ ಕುಂದಗೋಳ ಭಾಗದಲ್ಲಿ ಪ್ರವಾಹದ ಭೀತಿ ಉಂಟಾಗುತ್ತದೆ. ಇಂತಹ ಪರಿಸ್ಥಿತಿ ಇದ್ದರೂ ಪ್ರವಾಹ ನಿರ್ವಹಣೆಗೆ ಜಿಲ್ಲೆಯಲ್ಲಿ ಒಂದೇ ಒಂದು ದೋಣಿಯೂ ಇಲ್ಲದಂತಾಗಿದೆ.
ನೆರೆ ಜಿಲ್ಲೆಯಿಂದ ಎರವಲು: ನವಲಗುಂದತಾಲೂಕಿನ ಜಾವೂರು ಬಳಿ ಸಿಲುಕಿದ ದಂಪತಿ ರಕ್ಷಣೆಗೆ ಸುಮಾರು 16 ಗಂಟೆಗಳೇ ಬೇಕಾಯಿತು. ವಿಳಂಬಕ್ಕೆ ದೋಣಿ ಇಲ್ಲದಿರುವುದೇ ಕಾರಣವಾಯ್ತು. ದಂಪತಿ ಸಿಲುಕಿರುವ ಮಾಹಿತಿ ತಿಳಿದು ಇಲ್ಲಿನ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರೂ ದೋಣಿಯಿಲ್ಲದ ಪರಿಣಾಮ ಕೈಚೆಲ್ಲಿ ಕುಳಿತುಕೊಳ್ಳುವಂತಾಯಿತು. ಸುತ್ತಲಿನ ಜಿಲ್ಲೆಗಳಿಗೆ ಸಂಪರ್ಕಿಸಿದಾಗ ಬಾಗಲಕೋಟೆಯಲ್ಲಿ ದೋಣಿ ಸುಸ್ಥಿತಿ ಯಲ್ಲಿರುವುದು ತಿಳಿದು ಅಲ್ಲಿಂದ ಯಾಂತ್ರೀಕೃತ ದೋಣಿ ಸಹಿತ ಸಿಬ್ಬಂದಿ ಕರೆಯಿಸಿಕೊಳ್ಳ ಲಾಯಿತು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ದಂಪತಿ ರಕ್ಷಿಸುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಯಶಸ್ವಿಯಾದರು. ಒಂದು ವೇಳೆ ಜಿಲ್ಲೆಯಲ್ಲೇ ದೋಣಿ ಇದ್ದಿದ್ದರೆ ರಾತ್ರಿಯೇ ದಂಪತಿಯನ್ನು ರಕ್ಷಿಸಬಹುದಿತ್ತು ಎನ್ನುವ ಅಭಿಪ್ರಾಯ ಅಧಿಕಾರಿಗಳಿಂದ ಕೇಳಿ ಬಂತು.
ಇನ್ನೂ ದುರಸ್ತಿಯಾಗಿಲ್ಲ!: ಎರಡು ತಿಂಗಳ ಹಿಂದೆ ನವಲಗುಂದ ತಾಲೂಕಿನ ತುಪ್ಪರಿ ಹಳ್ಳದಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಇಲ್ಲಿನ ದೋಣಿಯ ಯಂತ್ರ ದುರಸ್ತಿಗೆ ಬಂದಿತ್ತು. ಆದರೆ ಇಲ್ಲಿಯವರೆಗೂ ದುರಸ್ತಿ ಮಾಡಿಸುವ ಗೋಜಿಗೆ ಅಗ್ನಿಶಾಮಕ ಅಧಿಕಾರಿಗಳು ಹೋಗಿಲ್ಲ. ಸುಸ್ಥಿತಿಯ ಕುರಿತು ಜಿಲ್ಲಾಡಳಿತದ ಪ್ರಕೃತಿ ವಿಕೋಪ ಪರಿಹಾರ ಸಮಿತಿಯೂ ತಲೆಕೆಡಿಸಿಕೊಂಡಿಲ್ಲ. ಪರಿಣಾಮ ಜಿಲ್ಲೆಯಲ್ಲಿನ ಪ್ರವಾಹ ನಿರ್ವಹಣೆಗೆ ಅಗ್ನಿಶಾಮಕ ದಳ ಇಲಾಖೆಗೆ ದೋಣಿಯೇ ಇಲ್ಲದಂತಾಗಿದೆ.
ರಕ್ಷಕರ ಪ್ರಾಣಕ್ಕೇ ಇಲ್ಲ ರಕ್ಷಣೆ : ಒಂದು ದೋಣಿ ಕಾರ್ಯಾಚರಣೆಗೆ ಇಳಿದರೆ ಹೆಚ್ಚುವರಿಯಾಗಿ ಇನ್ನೊಂದು ದೋಣಿ ದಡದಲ್ಲಿ ಸಿದ್ಧತೆಯಲ್ಲಿರಬೇಕು. ಪ್ರವಾಹದಲ್ಲಿ ರಕ್ಷಣಾ ಸಿಬ್ಬಂದಿ ಅಪಾಯದಲ್ಲಿ ಸಿಲುಕಿದರೆ ಅವರ ರಕ್ಷಣೆಗಾಗಿ ಈ ದೋಣಿಯ ಅವಶ್ಯಕತೆ ಇರುತ್ತದೆ. ಆದರೆ, ಅಗತ್ಯ ವಸ್ತುಗಳ ಕೊರತೆ ನಡುವೆ ಯಾವುದೇ ಸುರಕ್ಷತೆಯಿಲ್ಲದೆ ಅಗ್ನಿಶಾಮಕ ಸಿಬ್ಬಂದಿ ಪ್ರವಾಹದ ವಿರುದ್ಧ ಸೆಣಸಾಡಿ ಜನರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಅವರ ಪ್ರಾಣಕ್ಕೆ ಸುರಕ್ಷತೆಯಿಲ್ಲದಂತಾಗಿದೆ. ಜಿಲ್ಲೆಗಳಲ್ಲಿ ಕನಿಷ್ಠ ಎರಡು ದೋಣಿ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿಯ ತುರ್ತು ಕಾರ್ಯಾಚರಣೆಗೆ ಬೇಕಾದ ಸಾಮಗ್ರಿಗಳನ್ನು ಪೂರೈಸುವತ್ತ ಸರಕಾರ ಗಮನ ಹರಿಸಬೇಕು ಎಂಬುದು ಇಲಾಖೆ ನೌಕರರ ಒತ್ತಾಯವಾಗಿದೆ.
ವಿಪರ್ಯಾಸ ಅಂದ್ರೆ ಇದು ಸ್ವಾಮಿ..: ಧಾರವಾಡ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಅಗ್ನಿಶಾಮಕ ಇಲಾಖೆ ಮುಖ್ಯ ಕಚೇರಿ ಹಾಗೂ ಪ್ರಾದೇಶಿಕ ಕಚೇರಿ ಹುಬ್ಬಳ್ಳಿಯಲ್ಲಿದೆ. ವಿಪರ್ಯಾಸವೆಂದರೆ ಮುಖ್ಯ ಕಚೇರಿ ಹೊಂದಿರುವ ಅಗ್ನಿಶಾಮಕ ಠಾಣೆಗಳ ಪರಿಸ್ಥಿತಿ ಹೀಗಿರುವಾಗ ಇನ್ನೂ ಹೊರ ಜಿಲ್ಲೆಗಳ ಪರಿಸ್ಥಿತಿ ಹೇಗಿದೆ. ಇಂತಹ ಕೊರತೆಗಳ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪೂರಕ ವಸ್ತುಗಳ ಕೊರತೆ : ಬಾಗಲಕೋಟೆಯಿಂದ ದೋಣಿಯೊಂದಿಗೆ ಆಗಮಿಸಿದ ಸಿಬ್ಬಂದಿ ವಾಹನ ನೋಡಿದರೆ ಇಂತಹ ವಾಹನದೊಂದಿಗೆ ತುರ್ತು ಕಾರ್ಯಾಚರಣೆ ಅದ್ಹೇಗೆ ಕೈಗೊಳ್ಳುತ್ತಾರೆ ಸಮಯಕ್ಕೆ ಸರಿಯಾಗಿ ತಲುಪುತ್ತಾರಾ ಎನ್ನುವ ಪ್ರಶ್ನೆ ಮೂಡುವುದು ಸಾಮಾನ್ಯ. ಇನ್ನೂ ಕಾರ್ಯಾಚರಣೆಗೆ ಬೇಕಾದ ಅಗತ್ಯ ಲೈಫ್ ಜಾಕೇಟ್, ರೇನ್‌ಕೋಟ್ಸ್, ಟ್ಯೂಬ್ ಗಳು ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಎದ್ದುಕಾಣುತ್ತಿತ್ತು. ಇರುವುದರಲ್ಲೇ ತುರ್ತು ಸೇವೆ ಕೊಡಬೇಕು ಎನ್ನುವ ಹತಾಶೆ ಸಿಬ್ಬಂದಿಯದ್ದಾಗಿದೆ. ಬಹುತೇಕ ಇಲಾಖೆಗಳು ಮೇಲ್ದರ್ಜೆಗೇರುತ್ತಿದ್ದರೂ ತುರ್ತು ಸೇವೆಯ ಈ ಇಲಾಖೆ ಮಾತ್ರ ಇನ್ನೂ ಹಳೆಯ ವಾಹನಗಳಲ್ಲಿ ದಿನಗಳನ್ನು ದೂಡುತ್ತಿದೆ.
-ಹೇಮರಡ್ಡಿ ಸೈದಾಪುರ