Advertisement
ಸೂಕ್ತ ಚಿಕಿತ್ಸೆ ಮರೀಚಿಕೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ರೇಷ್ಮೆ ಉದ್ಯಮವನ್ನು ನೆಚ್ಚಿಕೊಂಡು ಸಹಸ್ರಾರು ಮಂದಿ ಜೀವನ ನಡೆಸುತ್ತಿದ್ದಾರೆ. ವಿಶೇಷವಾಗಿ ನೂಲು ಬಿಚ್ಚಾಣಿಕೆದಾರರು, ಬಡ ಕೂಲಿ ಕಾರ್ಮಿಕರು, ರೈತರು ರೇಷ್ಮೆ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಸದಾ ಕೂಲಿ ಕೆಲಸ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುವ ಬಡವರಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಎಂಬುದು ಕನಸಿನ ಮಾತಾಗಿದೆ.
Related Articles
Advertisement
ಸಂಸದರು-ಶಾಸಕರು ಗಮನಹರಿಸಲಿ: ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಕ್ಷೇತ್ರದ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಮುನಿಯಪ್ಪ ಅವರು ಗಮನಹರಿಸಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಪರದಾಟ : ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೆಡೆ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೋಗಿಗಳು ನರಳುತ್ತಿದ್ದರೆ, ಮತ್ತೂಂದೆಡೆ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ರೀತಿಯಲ್ಲಿ ಕುಡಿಯುವ ನೀರಿಲ್ಲದೆ ಹೊರಗಡೆಯಿಂದ ನೀರು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ಆವರಣದಲ್ಲಿ ಕೊರೆಸಿರುವ ಕೊಳವೆಬಾವಿಗಳು ನೀರಿಲ್ಲದೇ ವಿಫಲಗೊಂಡಿದ್ದು, ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಆಸ್ಪತ್ರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದ್ದು, ಅದು ಸಹ ಕೆಲವೊಮ್ಮೆ ನಿಲ್ಲುವುದರಿಂದ ರೋಗಿಗಳು ಅದರಲ್ಲೂ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲೆಗುಂಪಾದ ಸ್ಕ್ಯಾನಿಂಗ್ ಯಂತ್ರ: ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯ ನಡುವೆಯೂ ಸ್ಕ್ಯಾನಿಂಗ್ ಮಾಡುವ ಯಂತ್ರ ರೇಡಿಯಾಲಿಜಿಸ್ಟ್ ಇಲ್ಲದೇ ಮೂಲೆಗುಂಪಾಗಿದೆ. ಒಟ್ಟಾರೆ ಲಕ್ಷಾಂತರ ರೂ. ವೆಚ್ಚ ಮಾಡಿ ಖರೀದಿಸಿರುವ ಸ್ಕ್ಯಾನಿಂಗ್ ಯಂತ್ರ ಇದ್ದರೂ ಇಲ್ಲದಂತಾಗಿ ಮೂಲೆ ಗುಂಪಾಗಿದೆ. ಪ್ರಸ್ತುತ ಧೂಳಿ ಹಿಡಿದಿರುವ ಸ್ಕ್ಯಾನಿಂಗ್ ಯಂತ್ರವನ್ನು ಬಳಕೆ ಮಾಡಲು ರೇಡಿಯಾಲಿಜಿಸ್ಟ್ ಅವರನ್ನು ನೇಮಕ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಸಿಬ್ಬಂದಿ ಕೊರತೆ ನೀಗಿಸಲು ಕ್ರಮ: ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಆರೋಗ್ಯ ಸಚಿವರನ್ನು ಭೇಟಿಯಾಗಿ ತಜ್ಞ ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ತಿಳಿಸಿದ್ದಾರೆ. ನಗರಸಭೆ ಮೂಲಕ ಕೊರೆದಿರುವ ಕೊಳವೆಬಾವಿಯಲ್ಲಿ ನೀರು ಲಭಿಸಿದೆ. ಸಾರ್ವಜನಿಕ ಆಸ್ಪತ್ರೆಗೆ ನೀರಿನ ಸಂಪರ್ಕ ಕಲ್ಪಿಸಲು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕುರಿತು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಮೂರು ಜನ ವೈದ್ಯರು ವರ್ಗಾವಣೆಯಾಗಿದ್ದಾರೆ. ಇರುವ ವೈದ್ಯರು ಆಸ್ಪತ್ರೆಗೆ ಬರುವ ಒಳ ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ಕೊರೆಸಲಾಗಿದೆ. ಶೀಘ್ರವೇ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ. –ಡಾ.ವಾಣಿ, ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಶಿಡ್ಲಘಟ್ಟ
-ಎಂ.ಎ.ತಮೀಮ್ ಪಾಷ