Advertisement

ಭಕ್ತರಿಲ್ಲದೆ ಧಾರ್ಮಿಕ ಕ್ಷೇತ್ರಗಳು ಬಿಕೋ

11:33 AM Mar 17, 2020 | Suhan S |

ಅಫಜಲಪುರ: ದಿನದಿಂದ ದಿನಕ್ಕೆ ಪಸರಿಸುತ್ತಿರುವ ಕೊರೊನಾ ಸೋಂಕಿಗೆ ಭಯಗೊಂಡಿರುವ ಜನರು ದೇವಸ್ಥಾನಗಳಿಗೂ ಆಗಮಿಸುತ್ತಿಲ್ಲ. ಇದರಿಂದ ಗುಡಿ-ಮಂದಿರಗಳು ಭಕ್ತರಿಲ್ಲದೆ ಬಿಕೋ ಎನ್ನುತ್ತಿವೆ.

Advertisement

ದೇವಲ ಗಾಣಗಾಪುರ: ತಾಲೂಕಿನ ಸುಕ್ಷೇತ್ರಗಳಾದ ಘತ್ತರಗಿ ಮತ್ತು ದೇವಲ ಗಾಣಗಾಪುರಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಅದರಲ್ಲೂ ಪ್ರತಿನಿತ್ಯ ಸಾವಿರಾರು ಭಕ್ತರಿಂದ ತುಂಬಿರುತ್ತಿದ್ದ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಹಾಗೂ ಸಂಗಮ ಕ್ಷೇತ್ರದಲ್ಲಿಗ ಬೆರಳೆಣಿಕೆಯಷ್ಟು ಭಕ್ತರು ಕಾಣುತ್ತಿಲ್ಲ. ಈ ದೇವಸ್ಥಾನಕ್ಕೆ ದೇಶದ ವಿವಿಧ ಮೂಲೆಗಳಿಂದ ಭಕ್ತರು ಬರುತ್ತಾರೆ. ಮುಖ್ಯವಾಗಿ ಮಹಾರಾಷ್ಟ್ರ, ಕೇರಳ, ಸೀಮಾಂದ್ರ, ತೆಲಂಗಾಣ, ತಮಿಳುನಾಡು, ಗೋವಾ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪಲ್ಲಕ್ಕಿ, ಅನ್ನ ದಾಸೋಹ, ಪುಣ್ಯಸ್ನಾನ ನಿಲ್ಲಿಸಲಾಗಿದೆ.

ಘತ್ತರಗಿ: ತಾಲೂಕಿನ ಇನ್ನೊಂದು ಪುಣ್ಯಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ ಕೂಡ ಭಕ್ತರಿಲ್ಲದೆ ಭಣಭಣ ಎನ್ನುತ್ತಿದೆ. ಭಾಗ್ಯವಂತಿ ದೇವಸ್ಥಾನಕ್ಕೂ ನಿತ್ಯ ನೂರಾರು ಭಕ್ತರು ಬಂದು ಹೋಗುತ್ತಾರೆ. ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಕೊರೊನಾ ರೋಗದ ಭೀತಿಯಿಂದ ಭಕ್ತರು ಬರುತ್ತಿಲ್ಲ. ಹೀಗಾಗಿ ಭಾಗ್ಯವಂತಿ ದೇವಸ್ಥಾನಕ್ಕೂ ಭಕ್ತರ ಬರ ಕಂಡು ಬಂದಿದೆ. ಇನ್ನೂ ತಾಲೂಕಿನ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲೂ ಭಕ್ತರಿಲ್ಲದೆ ಇರುವುದರಿಂದ ದೇವಸ್ಥಾನಗಳು ಬಿಕೋ ಎನ್ನುತ್ತಿವೆ. ಎಲ್ಲಾ ದೇವಸ್ಥಾನಗಳಲ್ಲಿನ ಅನ್ನ ದಾಸೋಹ ಬಂದ್‌ ಮಾಡಲಾಗಿದೆ.

ಈಗಾಗಲೇ ಅನ್ನ ದಾಸೋಹ ನಿಲ್ಲಿಸಲಾಗಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.  –ಕೆ.ಜಿ ಬಿರಾದಾರ, ದೇವಲ ಗಾಣಗಾಪುರ, ಘತ್ತರಗಿ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next