Advertisement

ಯಾರು ಸತ್ತರೂ ಪ್ರತಿಭಟನೆ

02:12 PM Jan 11, 2020 | Suhan S |

ಗದಗ: ಈ ಗ್ರಾಮದಲ್ಲಿ ಯಾರೇ ಸತ್ತರೂ ಆಕ್ರಂದನಕ್ಕಿಂತ ಹೆಚ್ಚಾಗಿ ಆಕ್ರೋಶ, ಧಿಕ್ಕಾರದ ಕೂಗು ಕೇಳಿ ಬರುತ್ತದೆ. ನೆಪ ಮಾತ್ರಕ್ಕೆ ಸ್ಥಳಕ್ಕೆ ಧಾವಿಸುವ ಅಧಿಕಾರಿಗಳು ಸಮಾಧಾನಪಡಿಸಿ ಜಾರಿಕೊಳ್ಳುತ್ತಾರೆ. ಇದು ಜಿಲ್ಲಾ ಕೇಂದ್ರದಿಂದ ಕೂಗಳತೆ

Advertisement

ದೂರದಲ್ಲಿರುವ ತಾಲೂಕಿನ ಹಾತಲಗೇರಿ ಗ್ರಾಮಸ್ಥರ ದುಸ್ಥಿತಿ. ಗ್ರಾಮದಲ್ಲಿ ಒಂದೇ ಒಂದು ರುದ್ರಭೂಮಿ ಇಲ್ಲದೇ ದಶಕಗಳಿಂದ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ಪರದಾಡುತ್ತಿದ್ದಾರೆ. ಇತ್ತೀಚೆಗೆ ಈ ಸಮಸ್ಯೆ ತೀವ್ರಗೊಂಡಿದ್ದು, ಯಾರೇ ಸತ್ತರೂ ಗ್ರಾಮದಲ್ಲಿ ಪ್ರತಿಭಟನೆಯ ಕೂಗು ಸಾಮಾನ್ಯ ಎಂಬಂತಾಗಿದೆ.

ಹೌದು. ತಾಲೂಕಿನ ಹಾತಲಗೇರಿ ಗ್ರಾಮ 2011ರ ಜನಗಣತಿ ಪ್ರಕಾರ 2552 ಜನಸಂಖ್ಯೆಯಿದೆ. ಗ್ರಾಮ ಉದಯಾವಾದಾಗಿನಿಂದಲೂ ರುದ್ರಭೂಮಿಗಾಗಿ ಪ್ರತ್ಯೇಕವಾಗಿ ಜಮೀನು ಗುರುತಿಸಿಲ್ಲ. ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಒಂದೇ ಒಂದು ಎಕರೆ ಜಮೀನು ಇಲ್ಲದ ಕಾರಣ ಗ್ರಾಮದಲ್ಲಿ ಸ್ಮಶಾನ ಸಂಕಟ ಜೋರಾಗಿದೆ.

ಈ ಹಿಂದೆ ಹಲವು ದಶಕಗಳಿಂದ ಗ್ರಾಮದ ದೇವಪ್ಪ ಮುರ್ಲಾಪುರ ಎಂಬುವವರ ಕುಟುಂಬಸ್ಥರು ತಮ್ಮ 3 ಎಕರೆ ಜಮೀನಿನಲ್ಲಿ ಒಂದಿಷ್ಟು ಭಾಗವನ್ನು ಶವಗಳ ದಹನಕ್ಕೆಂದು ಬಿಟ್ಟುಕೊಟ್ಟಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ. ಹೀಗಾಗಿ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಂತೆ ತಡೆಯುತ್ತಿದ್ದಾರೆ. ಹೀಗಾಗಿ ಕೆಲವರು ಸ್ವಂತ ಜಮೀನುಗಳಲ್ಲೇ ಅಂತ್ಯಕ್ರಿಯೆನೆರವೇರಿಸಿದರೆ ಇನ್ನುಳಿದವರು ರುದ್ರಭೂಮಿ ಕಲ್ಪಿಸುವಂತೆ ಹೋರಾಟ ನಡೆಸುವಂತಾಗಿದೆ.

ಉಲ್ಟಾ ಹೊಡೆದ ಭೂಮಾಲೀಕರು: ಗ್ರಾಮಕ್ಕೆ ಪ್ರತ್ಯೇಕ ರುದ್ರಭೂಮಿ ಒದಗಿಸಲು ಜಿಲ್ಲಾಡಳಿತ ಭೂಮಿಗಾಗಿ ಹುಡುಕಾಟ ನಡೆಸಿತ್ತು. ಮೊದಲಿಗೆ ಮುರ್ಲಾಪುರ ಅವರ ಜಮೀನು ಸ್ವಾಧೀನಕ್ಕೆ ಉದ್ದೇಶಿಸಿತ್ತು. ಆರಂಭದಲ್ಲಿ ಆ ಕುಟುಂಬಸ್ಥರೂ ಸಮ್ಮತಿಸಿದ್ದರು. ಆದರೆ, ಸಕಾಲಕ್ಕೆ ಸರಕಾರದ ಪರಿಹಾರ ಹಣ ಬಿಡುಗಡೆಯಾಗದಿದ್ದರಿಂದ ಜಮೀನು ನೀಡಲು ನಿರಾಕರಿಸಿದರು ಎನ್ನಲಾಗಿದೆ.

Advertisement

ಆನಂತರ ಅದೇ ಗ್ರಾಮದ ಮತ್ತೋರ್ವ ರೈತ ಸ್ಮಶಾನಕ್ಕಾಗಿ ಭೂಮಿ ನೀಡಲು ಮುಂದೆ ಬಂದಿದ್ದರು. ಹೀಗಾಗಿ ಗ್ರಾ.ಪಂ. ವತಿಯಿಂದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಅದರಂತೆ ಜಿಲ್ಲಾಡಳಿತ ಎಕರೆಗೆ 6 ಲಕ್ಷ ರೂ. ನಿಗದಿಪಡಿಸಿ 3 ಎಕರೆ ಸ್ವಾಧೀನಕ್ಕೆ ಆದೇಶಿಸಿತ್ತು. ಈ ನಡುವೆ ಜಮೀನು ಮಾಲೀಕರ ಸಹೋದರರಲ್ಲಿ ಗಲಾಟೆ ಉಂಟಾಗಿದ್ದರಿಂದ ಅವರೂ ಜಮೀನು ನೀಡಲು ಹಿಂಜರಿದರು. ಹೀಗಾಗಿ ಸರಕಾರ ಖಜಾನೆಯಲ್ಲೇ ಕೊಳೆಯುವಂತಾಗಿದೆ ಎಂದು ಗ್ರಾ.ಪಂ. ಮೂಲಗಳು ತಿಳಿಸಿವೆ.

ಗ್ರಾಮದಲ್ಲಿ ಸದ್ಯಕ್ಕೆ ರುದ್ರಭೂಮಿಯೂ ಇಲ್ಲ. ಜಮೀನು ನೀಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಸ್ಮಶಾನ ಸಂಕಟ ತೀವ್ರವಾಗಿದೆ. ಕಳೆದ ನವೆಂಬರ್‌ ವರೆಗೆ ಗ್ರಾಮದಲ್ಲಿ ಯಾರೇ ಸತ್ತರೂ ಜನರು ಬೀದಿಗಿಳಿದು ಹೋರಾಟ ನಡೆಸುವಂತಾಗಿತ್ತು. ಜನರ ಸಮಸ್ಯೆಗೆ ಸ್ಪಂದಿಸಿರುವ ತಾಲೂಕು ಆಡಳಿತ ಕನ್ಯಾಳ ದಾರಿಯಲ್ಲಿರುವ ಹಳ್ಳದ ಬದಿ ಅಂತ್ಯಕ್ರಿಯೆ ನೆರವೇರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ಅದಕ್ಕು ಸುತ್ತಲಿನ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಿಂದ ಶಾಶ್ವತ ರುದ್ರಭೂಮಿ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಸರಕಾರ ಕಂದಾಯ ಗ್ರಾಮವನ್ನಾಗಿಸುವ ಸಂದರ್ಭದಲ್ಲೇ ರುದ್ರಭೂಮಿಯನ್ನು ಗುರುತಿಸಬೇಕು. ಈಗ ಹಣದಾಸೆಗೆ ಜಮೀನು ಮಾಲೀಕರು ಭೂಮಿ ನೀಡಲು ಮುಂದೆ ಬಂದರೂ ನೆರೆಹೊರೆಯರು, ಸಂಬಂಧಿಕರಿಂದ ಕಿರಿಕಿರಿ ಅನುಭವಿಸುವಂತಾಗುತ್ತದೆ. ಅದೇ ಕಾರಣಕ್ಕೆ ಈಗಾಗಲೇ ಕೆಲವರು ರುದ್ರಭೂಮಿಗೆ ಜಮೀನು ನೀಡಲು ಮುಂದೆ ಬಂದಿದ್ದರೂ ಬಳಿಕ ತಮ್ಮ ನಿರ್ಧಾರ ಬದಲಿಸಿದ್ದಾರೆ. ಸತ್ಯಪ್ಪ, ಹಾತಲಗೇರಿ ಗ್ರಾಮಸ್ಥ

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next