Advertisement

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

07:22 PM Dec 11, 2024 | Team Udayavani |

ಹೊಸಕೋಟೆ: ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿಗೆ ಕೂದಲೆಳೆ ಅಂತರದಲ್ಲಿರುವ ದೊಡ್ಡ ಅಮಾನಿಕೆರೆ ಬಿಟ್ಟರೆ, ಹೊಸಕೋಟೆ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವಿಲ್ಲದಿರುವುದರಿಂದ ಪ್ರಯಾಣಿಕರು ನಿತ್ಯ ಪರದಾಡುವುದು ಸಾಮಾನ್ಯವಾಗಿದೆ.

Advertisement

ಶೌಚಾಲಯ ಸಮಸ್ಯೆ: ಇತರೆ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಬಸ್‌ ನಿಲ್ದಾಣಗಳು ಅಭಿವೃದ್ಧಿ ಕಂಡಿದ್ದರೂ ಹೊಸಕೋಟೆಯಲ್ಲಿ ಮಾತ್ರ ಬಿಎಂಟಿಸಿ ಬಸ್‌ ನಿಲ್ದಾಣ ಹೊರತುಪಡಿಸಿದರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮರೀಚಿಕೆಯಾಗಿಯೇ ಉಳಿದಿದ್ದು, ದಿನನಿತ್ಯ ಪ್ರಯಾಣ ಮಾಡುವ ಸಾವಿರಾರು ಪ್ರಯಾಣಿಕರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲದಂತಾಗಿದೆ.

ರಸ್ತೆಯ ಪಕ್ಕದಲ್ಲಿ ನಿಂತೇ ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೊಸಕೋಟೆ ಮಾರ್ಗವಾಗಿ ಚಿಂತಾಮಣಿ, ಕೋಲಾರ, ಮಾಲೂರು, ಮದನಪಲ್ಲಿ, ಆಂಧ್ರ, ತಮಿಳುನಾಡು, ಕೇರಳ, ಮುಳಬಾಗಿಲು, ದೇವನಹಳ್ಳಿ, ವಿಜಯಪುರ, ದೂಡ್ಡಬಳ್ಳಾಪುರ,ತಿರುಪತಿ, ಪುಟ್ಟಭರ್ತಿ ಕಡೆಗಳಿಂದ ಹಾದು ಹೋಗುವ ಬಸ್‌ಗಳಿಗಾಗಿ ರಸ್ತೆ ಬದಿ ನಿಂತು ಕಾಯಬೇಕಿದೆ.

ಕಿರಿಕಿರಿ: ರಾಜ್ಯದ ವಿವಿಧೆಡೆಯ ಬಸ್‌ಗಳು ಹೊಸಕೋಟೆ ಮುಖಾಂತರ ಬೆಂಗಳೂರು ತಲುಪಬೇಕಿದೆ. ಆದರೆ, ಪಟ್ಟಣದಲ್ಲಿ ಬಸ್‌ ನಿಲ್ದಾಣವಿಲ್ಲದೆ ಬಿಸಿಲು, ಮಳೆ ಎನ್ನದೇ ಬಸ್‌ಗಾಗಿ ರಸ್ತೆಯಲ್ಲಿ ಕಾಯಬೇಕಿದೆ. ಶೌಚಾಲಯಕ್ಕೆ ಹೋಗಬೇಕಾದರೆ ಒಂದು ಕಿ.ಮೀ. ದೂರ ಹೋಗಬೇಕು. ಬಿಎಂಟಿಸಿ, ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಒಂದೇ ಕಡೆ ರಸ್ತೆಯಲ್ಲಿ ನಿಲ್ಲುವುದರಿಂದ ಪ್ರಯಾಣಿಕರು, ಸಾರ್ವಜನಿಕರು, ವ್ಯಾಪಾರಸ್ಥರಿಗೆ ಕಿರಿಕಿರಿಯಾಗುತ್ತಿದೆ.

ತಪ್ಪದ ಪರದಾಟ: ಹೊಸಕೋಟೆ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಹೂವು ಬೆಳೆಯುತ್ತಾರೆ. ಅವುಗಳನ್ನು ಸಾಗಿಸಲು ಇದೇ ಮಾರ್ಗದಲ್ಲಿ ಹೋಗಬೇಕು. ಪೊಲೀಸ್‌ ಠಾಣೆಯ ಮುಂದಿನ ತಂಗುದಾಣಗಳಲ್ಲಿ ಕೆಲವು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲದಂತಾಗಿದೆ. ಇನ್ನು ಸೆಡ್ಡುಗಳಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನಗಳು ಇಲ್ಲದಿರುವುದರಿಂದ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ. ಕನಿಷ್ಠ ಒಂದು ಎಕರೆ ಜಾಗದಲ್ಲಿ ಸಾರಿಗೆ ಬಸ್‌ ನಿಲ್ದಾಣ ಮಾಡಲು ಭೂಮಿ ಅಗತ್ಯವಿದೆ. ಯಾಕೆಂದರೆ ಆಂಧ್ರ, ತಮಿಳುನಾಡು, ಪುದುಚೇರಿ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತವೆ. ಆದರೆ, ಇಲ್ಲಿ ಯಾವುದೇ ಹೋಟೆಲ್‌ ಅಥವಾ ಅಂಗಡಿಗಳು ಇಲ್ಲ. ಲಗೇಜುಗಳ ರಕ್ಷಣೆ ಜತೆಗೆ ಬಸ್‌ಗಾಗಿ ಕಾಯುತ್ತಾ ಪ್ರಯಾಣಿಕರು ಬಸವಳಿದು ಹೋಗಿದ್ದಾರೆ

Advertisement

ವಿದ್ಯಾರ್ಥಿಗಳ ಪಾಡು ಹೇಳತೀರದು: ಇನ್ನು ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲ. ದಿನದ 24 ಗಂಟೆಗಳು ಬಸ್‌ಗಳು ಸಂಚರಿಸುತ್ತವೆ. ರಾತ್ರಿ ಹೊತ್ತು ಕೊರೆಯುವ ಚಳಿಯಲ್ಲೂ ಬಸ್‌ಗಾಗಿ ರಸ್ತೆಬದಿ ನಿಲ್ಲಬೇಕಿದೆ. ವಿದ್ಯಾರ್ಥಿಗಳ ಪಾಡು ಸಹ ಹೇಳ ತೀರದ್ದಾಗಿದ್ದು, ಬಸ್‌ಗಳಲ್ಲಿ ಹತ್ತಲು, ಸೀಟು ಹಿಡಿಯಲು ಹರಸಾಹಸಪಡುವಂತಾಗಿದೆ.

ಒಟ್ಟಾರೆ ಒಟ್ಟಾರೆ ಹೊಸಕೋಟೆಯಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಆಗಲೇಬೇಕೆಂಬುದು ಸಾರ್ವಜನಿಕರ, ಪ್ರಯಾಣಿಕರ ಒತ್ತಾಯವಾಗಿದೆ.

ಹೊಸಕೋಟೆಯಲ್ಲಿ ಸುಸಜ್ಜಿತ ಸಾರಿಗೆ ಬಸ್‌ ತಂಗುದಾಣವಿಲ್ಲದೇ ಶ್ರೀನಿವಾಸಪುರ, ಕೋಲಾರ, ಮಾಲೂರು ಕಡೆಗಳಿಂದ ಪ್ರಯಾಣಿಸುವ ಪ್ರಯಾಣಿಕರು ಮಳೆ, ಬಿಸಿಲೆನ್ನದೇ ಬಸ್‌ಗಾಗಿ ರಸ್ತೆಯಲ್ಲಿ ನಿಲ್ಲುತ್ತಾರೆ. ಆದಷ್ಟು ಬೇಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ●ಎನ್‌.ಎಂ ಆಂಜಿನಪ್ಪ ನಡವತ್ತಿ, ಮಾಜಿ ಅಧ್ಯಕ್ಷ, ಹೊಸಕೋಟೆ ತಾ.ರೈತ ಸಂಘ

ಬೆಂಗಳೂರಿನ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ ಗಳು ಮನೆಯಿಂದ ಬೇಗ ಹೊರಡುತ್ತಾರೆ. ಆದರೆ, ರಸ್ತೆಬದಿಯ ತಂಗುದಾಣದಲ್ಲಿ ಕುಡಿ ಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಸಂಬಂಧ ಪಟ್ಟವರು ಆದಷ್ಟು ಬೇಗ ಶೌಚಾಲಯ ನಿರ್ಮಿಸಲು ಮುಂದಾಗಬೇಕು. ●ಕಾವ್ಯಶ್ರೀ ಕೆ., ವಿದ್ಯಾರ್ಥಿನಿ, ಹೊಸಕೋಟೆ

ಹೊಸಕೋಟೆ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದಿನನಿತ್ಯ ಸಹಸ್ರಾರು ಮಂದಿ ಕೆಲಸ ಕಾರ್ಯಗಳಿಗಾಗಿ ಬೆಂಗಳೂರಿಗೆ ಹೋಗುತ್ತಾರೆ. ಹೊಸಕೋಟೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣ ತುರ್ತಾಗಿ ಆಗಬೇಕಿದೆ. ●ಬ್ಯಾಟೇಗೌಡ, ಪ್ರಯಾಣಿಕ

ಹೊಸಕೋಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಜಾಗ ಗುರುತಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸ ಲಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಈ ಸಂಬಂಧ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ. ಶರತ್‌ ಬಚ್ಚೇಗೌಡ, ಶಾಸಕರು, ಹೊಸಕೋಟೆ

ಕೆ.ಎಂ.ಕಾಂತರಾಜ್‌

 

Advertisement

Udayavani is now on Telegram. Click here to join our channel and stay updated with the latest news.

Next