Advertisement

ಕೊರಟಗೆರೆ ತಾಲ್ಲೂಕಿನ ಕುಗ್ರಾಮ ಕುಮಟೇನಹಳ್ಳಿಗೆ ಹಳ್ಳವೇ ರಸ್ತೆ..!

05:29 PM Aug 30, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮವು ಕಂದಾಯ ಗ್ರಾಮಕ್ಕೆ ಒಳಪಟ್ಟಿದ್ದು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು 150ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮಕ್ಕೆ ರಸ್ತೆಯೇ ಇಲ್ಲ. ಈ ಗ್ರಾಮದ ಮಧ್ಯೆ ಹರಿಯುವ ಹಳ್ಳ ರಸ್ತೆಯಾಗಿ ಮಾರ್ಪಟ್ಟಿದೆ.

Advertisement

ಸ್ಥಳೀಯ ಜನ ಪ್ರತಿನಿಧಿಗಳು ಶಾಸಕರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.  ಕಂದಾಯ ಗ್ರಾಮದ  ಕುಮಟೇನಹಳ್ಳಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು ಸರಿ ಸುಮಾರು 120ಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿದೆ. ಸುಮಾರು ಏಳು ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಮುಖ್ಯವಾಗಿ ರಸ್ತೆ ಸಂಪರ್ಕ ಇಲ್ಲದೆ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಬೆಂಡೋಣೆ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ  ಕುಮಟೇನಹಳ್ಳಿ ಗ್ರಾಮದ ಜನರು ಹೊರ ಪ್ರಪಂಚಕ್ಕೆ ಕಾಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಕಾಶೆ ರಸ್ತೆ ತೆರವು ಮಾಡಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಸರಿ ಸುಮಾರು ಏಳು ವರ್ಷಗಳ ಹಿಂದಿನಿಂದಲೂ ಸತತವಾದ ಹೋರಾಟವನ್ನು ಈ ಊರಿನ ಗ್ರಾಮಸ್ಥರು ಮಾಡುತ್ತಿದ್ದಾರೆ. ಆದರೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಗಾಢ ನಿದ್ರೆಗೆ ಜಾರಿದ್ದಾರೆ.

ಜೋರಾದ ಮಳೆ ಬಂದರೆ ಶಾಲಾ ಮಕ್ಕಳು ಶಾಲೆಗೆ ಹೋಗಲು ಆಗದೆ ಮನೆಯಲ್ಲೇ ಉಳಿಯುತ್ತಾರೆ. ವಯಸ್ಸಾದ ವೃದ್ಧರು ಅಂಗವಿಕಲರು ,ಪುಟ್ಟ ಮಕ್ಕಳು ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದರೆ ಹರಿಯುವ ಹಳ್ಳದ ಮಧ್ಯೆಯೇ ಜೀವದ ಹಂಗು ತೊರೆದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ.ಜಿ. ಪರಮೇಶ್ವರ್  ಈ ನಮ್ಮ ಗ್ರಾಮಕ್ಕೆ ಒಮ್ಮೆಯೂ ಸಹ ಭೇಟಿ ನೀಡಿಲ್ಲ ಚುನಾವಣೆ ಸಮಯದಲ್ಲಿ ಮಾತ್ರ ನಮ್ಮೂರಿಗೆ ಭೇಟಿ ನೀಡಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆಂದು ಆಶ್ವಾಸನೆಯನ್ನು ಮಾತ್ರ ನೀಡಿ ಹಿಂತಿರುಗಿದ ಶಾಸಕರು ಇಲ್ಲಿಯವರೆಗೂ ಕೂಡ ನಮ್ಮ ಗ್ರಾಮಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಳಲು ತೋಡಿಕೊಂಡಿದ್ದಾರೆ.

ನಮ್ಮ ಕಷ್ಟಗಳನ್ನು ಕೇಳಿಲ್ಲ ಇನ್ನಾದರೂ ಶಾಸಕರು ಎಚ್ಚೆತ್ತುಕೊಂಡು ನಮ್ಮ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕಾಗಲಿ, ಯಾವುದೇ ವ್ಯಕ್ತಿಯಾಗಲಿ, ಮತವನ್ನು ನೀಡದೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಊರಿನ ಯುವಕ ಹನುಮಂತರಾಜು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಊರಿನಿಂದ ಒಂದೂವರೆ ಕಿಲೋಮೀಟರ್ ದೂರವಿರುವ ಬೆಂಡೋಣೆ ಗ್ರಾಮಕ್ಕೆ ಹಳ್ಳದಲ್ಲಿಯೇ ನಡೆದುಕೊಂಡು ಸ್ನೇಹಿತರೊಂದಿಗೆ ಹೋಗುತ್ತೇವೆ. ನಮ್ಮ ಜೊತೆ ಚಿಕ್ಕ ಮಕ್ಕಳು ಶಾಲೆಗೆ ಬರುತ್ತಾರೆ ಈ ಹಳ್ಳದಲ್ಲಿಯೇ ನಾವು ದಿನ ನಿತ್ಯ ಶಾಲೆಗೆ ಹೋಗುತ್ತೇವೆ. ಹೆಚ್ಚು ಮಳೆ ಬಂದರೆ ನೀರು ಜಾಸ್ತಿ ಹರಿಯುವುದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಶಾಸಕರು ಮತ್ತು ಅಧಿಕಾರಿಗಳು ಬಗೆಹರಿಸಬೇಕೆಂದು ವಿದ್ಯಾರ್ಥಿನಿ ಮಾಲಾ ಒತ್ತಾಯ ಮಾಡಿದ್ದಾರೆ.

ನಮ್ಮ ಊರಿಗೆ ಪ್ರತ್ಯೇಕವಾದ ನಕಾಶೆ ರಸ್ತೆ ಇದೆ. ಆದರೆ ಕೆಲವರು ರಸ್ತೆಯನ್ನು ಒತ್ತುವರಿ ಮಾಡಿರುತ್ತಾರೆ. ನಾವು ಸುಮಾರು ಏಳು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಹಾಗೂ ಶಾಸಕರ ಗಮನಕ್ಕೂ ಈ ವಿಚಾರವನ್ನು ತಂದಿರುತ್ತೇವೆ. ಆದರೆ ಬಲಾಢ್ಯರು ರಸ್ತೆಯನ್ನು ಒತ್ತುವರಿ ಮಾಡಿದ್ದು ರಸ್ತೆಯನ್ನು ತೆರೆವು ಮಾಡಲು ಅಧಿಕಾರಿಗಳು ಮಾತ್ರ ಮುಂದೆ ಬರುತ್ತಿಲ್ಲ. ಹೀಗಾಗಿ ನಾವು ಪ್ರತಿನಿತ್ಯ ಹರಿಯುವ ಹಳ್ಳದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥೆ ಲಕ್ಷ್ಮಮ್ಮ ಹೇಳಿದರು.

ಇನ್ನಾದರೂ ಸ್ಥಳೀಯ ಶಾಸಕರು ಮತ್ತು ತಾಲ್ಲೂಕು ಪಂಚಾಯಿತಿ , ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮತ್ತು ತಾಲ್ಲೂಕು ದಂಡಾಧಿಕಾರಿಗಳು ಎಚ್ಚೆತ್ತುಕೊಂಡು ಅಭಿವೃದ್ದಿ ಕಾರ್ಯ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next