Advertisement

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

11:33 PM Nov 08, 2022 | Team Udayavani |

ಬೆಂಗಳೂರು: ರಾಜ್ಯದ ಸರ ಕಾರಿ ಆಸ್ಪತ್ರೆಗಳಲ್ಲಿ ಬರೊಬ್ಬರಿ 44 ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿದೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್‌.ಎಂ.ಎಸ್‌.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.

Advertisement

ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ ರಕ್ಷಕ ಔಷಧಿಗಳ ಅಭಾವದಿಂದ ರೋಗಿಗಳು ಪರದಾಡುವಂತಾಗಿದೆ.

2020-21ನೇ ಸಾಲಿನ ರಾಜ್ಯದ ಆರೋಗ್ಯ ಕೇಂದ್ರಗಳ ಬೇಡಿಕೆಗೆ ಅನುಗುಣವಾಗಿ 445 ಔಷಧಗಳ ಪೈಕಿ 210 ಔಷಧಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅರ್ಹ ಬಿಡ್‌ದಾರರ ಕೈಗೆ ಖರೀದಿ ಆದೇಶ ಪತ್ರವೂ ಸಿಕ್ಕಿದೆ. ಉಳಿದ 235 ಔಷಧಗಳಲ್ಲಿ 98 ಔಷಧಗಳ ಖರೀದಿ ಮತ್ತು ಸರಬರಾಜಿಗೆ 3ನೇ ಬಾರಿ ಆಹ್ವಾನಿಸಿದ ಟೆಂಡರ್‌ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. 83 ಔಷಧಗಳಿಗೆ ಆಹ್ವಾನಿಸಿದ ಟೆಂಡರ್‌ ಅಂಗೀಕಾರ ಪ್ರಾಧಿಕಾರದ ಹಂತದಲ್ಲಿದೆ. ಆದರೆ, ಇನ್ನುಳಿದ ಅತ್ಯವಶ್ಯಕ 44 ಜೀವ ರಕ್ಷಕ ಔಷಧಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದರೂ, ಸರಬರಾಜಿಗೆ 60 ದಿನ ಬೇಕಾಗುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಖರೀದಿಸಲು ಆರೋಗ್ಯ ಕೇಂದ್ರಗಳಿಗೆ ಅನುಮತಿ ನೀಡುವಂತೆ ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ತಾತ್ಕಾಲಿಕವಾಗಿ ಎಬಿ-ಎಆರ್‌ಕೆ ಹಾಗೂ ಎನ್‌ಎಫ್ಡಿಎಸ್‌ ಅನುದಾನದಲ್ಲಿ ಈ ಔಷಧ ಖರೀದಿಸುವಂತೆ ಇಲಾಖೆಯ ಆಯುಕ್ತ ಡಿ. ರಂದೀಪ್‌ ಸುತ್ತೋಲೆ ಹೊರಡಿಸಿದ್ದಾರೆ.

ಔಷಧ ಪೂರೈಕೆ ಸಂಬಂಧ 2020-21ನೇ ಸಾಲಿನ ಬಾಕಿ ಉಳಿದಿರುವ ಟೆಂಡರ್‌ ಪ್ರಕ್ರಿಯೆ ಗಳನ್ನೇ ಇನ್ನೂ ಅಂತಿಮ ಗೊಳಿಸಿಲ್ಲ. 2021-22ನೇ ಸಾಲಿನ ಟೆಂಡರ್‌ ಪಡೆಯಲು ಯಾವುದೇ ಸಂಸ್ಥೆ ಗಳು ಮುಂದೆ ಬರುತ್ತಿಲ್ಲ. 2022-23ನೇ ಸಾಲಿನ ಟೆಂಡರ್‌ಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಟೆಂಡರ್‌ಗಳನ್ನು ಸೂಕ್ತ ಕಾರಣವಿಲ್ಲದೇ ರದ್ದು ಮಾಡಲಾಗುತ್ತಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ನಿಯಮವೂ ಪಾಲನೆಯಾಗುತ್ತಿಲ್ಲ.

ತಮಿಳುನಾಡು, ಆಂಧ್ರ, ಕೇರಳ ಗಳಲ್ಲಿ ಪ್ರತಿವರ್ಷ ಫೆಬ್ರವರಿಯಲ್ಲಿ ಹೊಸ ಟೆಂಡರ್‌ ಆಹ್ವಾನಿಸಿ ಮಾರ್ಚ್‌ನಲ್ಲಿ ಅಂತಿಮ ಪ್ರಕ್ರಿಯೆ ಮುಗಿಸಿ ಏಪ್ರಿಲ್‌ನಲ್ಲಿ ಔಷಧಗಳ ದಾಸ್ತಾನು ಮಾಡಲಾಗುತ್ತದೆ. ಆದರೆ, ಅವೈಜ್ಞಾನಿಕ ನಿಯಮಗಳಿಂದಾಗಿ ಟೆಂಡರ್‌ ಪ್ರಕ್ರಿಯೆ ವಿಳಂಬವಾಗುತ್ತಿದೆ. ಔಷಧ ಪೂರೈಕೆದಾರರಿಗೆ 4 ವರ್ಷ ಕಳೆದರೂ ಕೋಟ್ಯಂತರ ಬಿಲ್‌ ನೀಡಲು ನಿಗಮ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

Advertisement

ಯಾವೆಲ್ಲ ಔಷಧ ಕೊರತೆ?
ಪ್ಯಾರಸಿಟಮೊಲ್ , ಪುಯನ್‌ಜೋಲ್‌ ಕ್ಯಾಪೊಲ್ಸ್‌, ಡಿಸೈಕ್ಲೋಮೈನ್‌ ಹೈಡ್ರೋಕ್ಲೋರೈಡ್‌ ಇಂಜೆಕ್ಷನ್‌, ಫ್ಯೂರೋಸೆಮೈಡ್‌ ಇಂಜೆಕ್ಷನ್‌, ಹಾವು ಕಡಿತ ಚುಚ್ಚುಮದ್ದು, ಮೆಟಿರ್ಮಿನ್‌, ಬ್ಲಿಡ್‌ ಗ್ರೂಪಿಂಗ್‌ ಕಿಟ್‌, ಡಿಕ್ಲೋಫೆನಾಕ್‌ ಸೋಡಿಯಂ ಇಂಜೆಕ್ಷನ್‌, ವಿಟಮಿನ್‌ ಡಿ ಕ್ಯಾಲ್ಸಿಯಂ, ಟ್ಯಾಬ್ಲೆಟ್‌ ರಾನಿಟಿಡಿನ್‌, ಇಮ್ಯೂನೊಗ್ಲೋಬ್ಯೂಲಿನ್‌, ಎಚ್‌ಬಿಎಸ್‌ಎಜಿ ಕಿಟ್‌, ಬಿಎಸ್‌ಎಜಿ ಕಿಟ್‌, ವಿಡಿಆರ್‌ಎಲ್‌ ಕಿಟ್‌, ಡಬ್ಲ್ಯುಐಡಿಎಲ್‌ ಕಿಟ್‌, ಮೂತ್ರ ಸಂಗ್ರಹ ಚೀಲ, ಕೈಗವಸು ಸೇರಿದಂತೆ 44ಕ್ಕೂ ಹೆಚ್ಚಿನ ಔಷಧಿಗಳ ಅಭಾವ ಉಂಟಾಗಿದೆ.

ಶ್ವಾಸಕೋಶ ಹಾಗೂ ಕರಳು ಸಮಸ್ಯೆ, ಅಸ್ತಮಾ, ರಕ್ತಹೀನತೆ, ನ್ಯುಮೋನಿಯಾ, ಕ್ಯಾನ್ಸರ್‌, ಸಕ್ಕರೆಕಾಯಿಲೆ, ಹೃದಯ ಶಸ್ತ್ರಚಿಕಿತ್ಸೆ, ರಕ್ತ ಹೆಪ್ಪುಗಟ್ಟುವಿಕೆ, ಮೈಗ್ರೇನ್‌, ಶೀತ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಹುಣ್ಣು, ನೋವು, ವಾಂತಿ, ಮೂಳೆ, ತುರಿಕೆ, ಫ‌ಂಗಸ್‌, ಮಿದುಳು, ಕಣ್ಣಿನ ನೋವು ಸೊಂಕು ನಿವಾರಕ ಔಷಧಗಳ ಕೊರತೆ ಎದುರಾಗಿದೆ.

2021-22ನೇ ಸಾಲಿನಲ್ಲಿ ಔಷಧಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಔಷಧಿಗಳ ಅಭಾವ ಉಂಟಾಗಿದೆ. ಜೀವ ರಕ್ಷಕ ಔಷಧಿ ಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕೊರತೆ ಇರುವ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ಪೂರೈಸಲು ಸೂಚಿಸಲಾಗಿದೆ.
– ಡಿ. ರಂದೀಪ್‌,
ಆಯುಕ್ತರು, ಆರೋಗ್ಯ ಇಲಾಖೆ


– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next