Advertisement

ಆರೋಗ್ಯ ಕೇಂದ್ರಕ್ಕಿಲ್ಲ ವೈದ್ಯಾಧಿಕಾರಿ

03:56 PM Aug 18, 2020 | Suhan S |

ಕಲಾದಗಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ ಎರಡು ತಿಂಗಳಿಂದ ವೈದ್ಯಾಧಿಕಾರಿ ಇಲ್ಲದೇ ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯಗಳು ಸಿಗದೇ ಆರೋಗ್ಯಕ್ಕಾಗಿ ಅಲೆದಾಡುವಂತ ಪರಿಸ್ಥಿತಿ ಉಂಟಾಗಿದೆ.

Advertisement

ಕೂಡಲೇ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ನಿಯೋಜಿಸಲು ಇಲ್ಲಿನ ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಇಲ್ಲದೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದು ಸೂಕ್ತ ಚಿಕಿತ್ಸೆ ಹಾಗೂ ವೈದ್ಯರ ಕೊರತೆ ಕಾಡುತ್ತಿದೆ. ಆರೋಗ್ಯ ಸಮಸ್ಯೆ ಅನುಭವಿಸುವಂತಾಗಿದೆ. ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿನ 75000ಕ್ಕೂ ಅಧಿಕ ಜನರ ಆರೋಗ್ಯ ಕಾಳಜಿ ವಹಿಸಬೇಕಾದ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಇಲ್ಲದೆ ಆರೋಗ್ಯ ಕೇಂದ್ರದ ಮೇಲ್ವಿಚಾರಣೆಯ ಆರೋಗ್ಯವೇ ತಪ್ಪುತ್ತಿದೆ.

ಆರೋಗ್ಯ ಕೇಂದ್ರಕ್ಕೆ, ಆರೋಗ್ಯ ತಪಾಸಣೆಗೆ ಬರುವ ಸಾರ್ವಜನಿಕರಿಗೆ ಆರೋಗ್ಯ ಚಿಕಿತ್ಸೆ ನೀಡುವುದಲ್ಲದೇ ಕಲಾದಗಿ ಭಾಗದ 10 ಉಪಕೇಂದ್ರಗಳ ಮೇಲ್ವಿಚಾರಣೆ, ಉಪಕೇಂದ್ರದ ವ್ಯಾಪ್ತಿಯಲ್ಲಿಬರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ, ಆರೋಗ್ಯ ತಪಾಸಣೆ, ಗರ್ಭಿಣಿ ಬಾಣಂತಿಯರ ಆರೋಗ್ಯ ಪರೀಕ್ಷೆ ಮೊದಲಾದ ಕಾರ್ಯಗಳು ಬರುತ್ತವೆ. ಆರೋಗ್ಯ ಕೇಂದ್ರ ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. 10 ಉಪಕೇಂದ್ರ ವ್ಯಾಪ್ತಿಯಲ್ಲಿ 98 ಅಂಗನವಾಡಿ ಕೇಂದ್ರದಗಳು ಬರುತ್ತಿದ್ದು, 0-6 ವರ್ಷ ದೊಳಗಿನ 7954 ಮಕ್ಕಳ ಆರೋಗ್ಯ ತಪಾಸಣೆಯನ್ನು ವೈದ್ಯಾಧಿಕಾರಿಗಳು ಮಾಡಬೇಕಾಗಿದೆ. ಅವರೇ ಇಲ್ಲವಾಗಿದ್ದರಿಂದ ಮಕ್ಕಳಿಗೆ ಸಹಿತ ಆರೋಗ್ಯ ಸೇವೆಗಳು ಸಿಗುತ್ತಿಲ್ಲ. 27 ಶ್ಯಾಮ್‌ ಮಕ್ಕಳಿಗೆ ಆರೋಗ್ಯ ತಪಾಸಣೆ ಸೇವೆ ಸಿಗುತ್ತಿಲ್ಲ.

ವೈದ್ಯಾಧಿಕಾರಿ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದು, ಅತೀ ಹೆಚ್ಚಿನ ಆರೋಗ್ಯ ಕಾಳಜಿ ವಹಿಸಬೇಕಾದ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಯನ್ನು ನಿಯೋಜಿಸಿ ಜನರ ಆರೋಗ್ಯ ಕಾಳಜಿ ವಹಿಸಬೇಕು – ಶ್ರೀಧರ ವಾಘ, ಪಿಕೆಪಿಎಸ್‌ ನಿರ್ದೇಶಕ ಕಲಾದಗಿ

ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ನಿಯೋಜನೆ ಮಾಡಲು ಜಿಲ್ಲಾಧಿಕಾರಿಗಳಲ್ಲಿ, ಜಿಪಂ ಸಿಇಒ ಅವರಲ್ಲಿ ಮಾತನಾಡಿ ಶೀಘ್ರ ವೈದ್ಯಾಧಿಕಾರಿ ನಿಯೋಜನೆ ಮಾಡಲು ತಿಳಿಸಲಾಗುವುದು. -ಮುರುಗೇಶ್‌ ನಿರಾಣಿ, ಬೀಳಗಿ ಶಾಸಕ

Advertisement

ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ, ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಇಲ್ಲದಿರುವುದು ಗಮನಕ್ಕೆ ಬಂದಿಲ್ಲ, ತಕ್ಷಣವೇ ವೈದ್ಯಾಧಿಕಾರಿ ನಿಯೋಜಿಸಲು ಡಿಎಚ್‌ಒ ಅವರಲ್ಲಿ ಮಾತಾಡುವೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೂ ಒತ್ತಾಯಿಸುವೆ. – ಬಸವರಾಜ.ಬಿ.ಖೋತ, ಜಿಲ್ಲಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ

ಕಲಾದಗಿ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕವಾಗಿ ಡಾ| ಬಿ.ಜಿ.ಹುಬ್ಬಳ್ಳಿಯವರನ್ನು ಪ್ರಭಾರಿ ವೈದ್ಯಾಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಂಬಿಬಿಎಸ್‌ ವೈದ್ಯರ ನಿಯೋಜನೆ ಮಾಡಲಾಗುವುದು. -ಅನಂತ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಾಗಲಕೋಟೆ

 

ಚಂದ್ರಶೇಖರ.ಆರ್‌.ಎಚ್‌

Advertisement

Udayavani is now on Telegram. Click here to join our channel and stay updated with the latest news.

Next