ದಾವಣಗೆರೆ: ಹತ್ತಿ ಮಿಲ್‌ಗಳಿಂದಲೇ ಮ್ಯಾಂಚೆಸ್ಟರ್ ಸಿಟಿ, ಸಿಪಿಐನ ಭದ್ರಕೋಟೆ, ಕಾರ್ಮಿಕ ವಲಯದ ಅನೇಕಾನೇಕ ಹೋರಾಟದ ನೆಲವೀಡು ದಾವಣಗೆರೆಯಲ್ಲಿ ಮೇ 1ರ ಕಾರ್ಮಿಕ ದಿನಾಚರಣೆಯ ಗತವೈಭವ ಈಗ ಬರೀ ನೆನಪು ಎನ್ನುವಂತಾಗಿದೆ. ದಾವಣಗೆರೆಯಲ್ಲಿ ಮೇ 1 ರಂದು ನಡೆಯುತ್ತಿದ್ದ ಕಾರ್ಮಿಕ ದಿನಾಚರಣೆ ಇಡೀ ರಾಜ್ಯ ಮಾತ್ರವಲ್ಲ ದೇಶದ ಗಮನವನ್ನೇ ಸೆಳೆಯುವಂತಿತ್ತು.
ದಿಗ್ಗಜ ಕಾರ್ಮಿಕ ಮುಖಂಡರು ಮೇ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದರು. ಕಾರ್ಮಿಕ ದಿನಾಚರಣೆಯ ಮೂಲಕ ಇಡೀ ರಾಜ್ಯದ ಕಾರ್ಮಿಕ ವಲಯಕ್ಕೆ ರವಾನೆಯಾಗುತ್ತಿದ್ದ ಸಂದೇಶ ಕಾರ್ಮಿಕ ವಲಯದಲ್ಲಿ ಸಂಚಲನವನ್ನೇ ಮೂಡಿಸುತ್ತಿತ್ತು. ದಾವಣಗೆರೆಯ ಕಾರ್ಮಿಕ ದಿನಾಚರಣೆ ರಾಜ್ಯದ ಕಾರ್ಮಿಕ ವಲಯಕ್ಕೆ ಮುಂದಿನ ದಿನಗಳಲ್ಲಿನ ಕಾರ್ಯಚಟುವಟಿಕೆ, ಹೋರಾಟದ ದಾರಿದೀಪ ಎನ್ನುವಂತಿತ್ತು. 1970-80ರ ದಶಕದಲ್ಲಿ ದಾವಣಗೆರೆಯಲ್ಲಿ ದಾವಣಗೆರೆ ಕಾಟನ್ ಮಿಲ್, ಚಂದ್ರೋದಯ, ಶಂಕರ್, ಸಿದ್ದೇಶ್ವರ್, ಯಲ್ಲಮ್ಮ, ಆಂಜನೇಯ ಹೀಗೆ 9ಕ್ಕೂ ಹೆಚ್ಚು ಜವಳಿ ಮಿಲ್, ಜಿನ್ನಿಂಗ್ ಮಿಲ್‌ಗಳಿದ್ದ ಕಾರಣಕ್ಕೆ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಖ್ಯಾತಿಗೆ ಒಳಗಾಗಿತ್ತು.
ಹತ್ತಾರು ಜವಳಿ ಮಿಲ್, ಪರ್ಯಾಯವಾಗಿದ್ದ ಜಿನ್ನಿಂಗ್ ಮಿಲ್‌ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಎಡಪಕ್ಷಗಳ ನೇತೃತ್ವದಲ್ಲಿ ಅದರಲ್ಲೂ ಸಿಪಿಐನಡಿ ಸಂಘಟಿತರಾಗಿದ್ದರು. ಸಿಪಿಐ ಮುಖಂಡರಾಗಿದ್ದ ಮಾಜಿ ಶಾಸಕ ಪಂಪಾಪತಿ, ಎಚ್.ಕೆ. ರಾಮಚಂದ್ರಪ್ಪ, ಸೈಯದ್ ಜಿಕ್ರಿಯಾ, ಜೆ.ಎಂ. ಹನುಮಂತಪ್ಪ, ಆನಂದರಾಜ್ ಅನೇಕರ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆ ಉತ್ತುಂಗದಲ್ಲಿತ್ತು. ಅಂದಿನ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಎಂದರೆ ಪಕ್ಷ ಎಷ್ಟೊಂದು ಬಲವಾಗಿ ಬೇರೂರಿತ್ತು ಎಂಬುದು ಗೊತ್ತಾಗುತ್ತದೆ. ಪಂಪಾಪತಿಯವರು ಮೂರು ಬಾರಿ ದಾವಣಗೆರೆಯ ಶಾಸಕರು ಸಹ ಆಗಿದ್ದರು. ಮೇ ದಿನಾಚರಣೆಯಂದು ಅಕ್ಷರಶಃ ಕೆಂಪುಸೂರ್ಯನೇ ಉದಯಿಸಿರುವಂತೆ ದಾವಣಗೆರೆ ಶೃಂಗಾರವಾಗುತ್ತಿತ್ತು. ದಾವಣಗೆರೆಗೆ ದಾವಣಗೆರೆಯೇ ಕೆಂಪುಮಯವಾಗಿ ಹೋಗುತ್ತಿತು.
ಕಣ್ಣಿಗೆ ಹಬ್ಬ ಉಂಟು ಮಾಡುವಂತೆ ದಿನಾಚರಣೆ ನಡೆಯುತ್ತಿತ್ತು. ದಾವಣಗೆರೆ ಕಾಟನ್ ಮಿಲ್‌ನಿಂದ ಮೆರವಣಿಗೆ ಪ್ರಾರಂಭವಾದರೆ ಕಿಲೋಮೀಟರ್ ಉದ್ದದವರೆಗೆ ಕೆಂಪು ಸಮವಸ್ತ್ರಧಾರಿಗಳಾದ ಸಾವಿರಾರು ಕಾರ್ಮಿಕರೇ ಕಂಡು ಬರುತ್ತಿದ್ದರು. ಮೆರವಣಿಗೆ ಸಾಗಿ ಬರುತ್ತಿದ್ದ ರಸ್ತೆಯ ಇಕ್ಕೆಲದಲ್ಲಿ ಸಾವಿರಾರು ಜನರು ಕಾರ್ಮಿಕರ ಭವ್ಯ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದರು. 80ರ ದಶಕದವರೆಗೆ ದಾವಣಗೆರೆಯಲ್ಲಿ ಕಾರ್ಮಿಕ ದಿನಾಚರಣೆ ನೋಡುವುದೇ ಸೊಬಗು ಎನ್ನುವಂತೆ ಆಚರಣೆ ನಡೆಯುತ್ತಿತ್ತು. ಜಾಗತೀಕರಣ ಪ್ರವೇಶದ ನಂತರ ದೇಶಿಯ ಜವಳಿ ಕ್ಷೇತ್ರದಲ್ಲಿ ಉಂಟಾದ ಭಾರೀ ಬದಲಾವಣೆಯ ನೇರ ಪರಿಣಾಮ ದಾವಣಗೆರೆಯ ಜವಳಿ ಮಿಲ್‌ಗಳ ಬೀರಲಾರಂಭಿಸಿತು. ಜಾಗತೀಕರಣದ ಬದಲಾವಣೆಗೆ ಅನುಗುಣವಾಗಿ ಆಗಬೇಕಿದ್ದ ಬದಲಾವಣೆಯೇ ಆಗಲಿಲ್ಲ. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ವೇಳೆಗೆ ಕಾಲ ಮಿಂಚಿತ್ತು. ದೇಶ, ವಿದೇಶದ ಜವಳಿ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿದ್ದಂತಹ ದಾವಣಗೆರೆಯ ಜವಳಿ ಮಿಲ್‌ಗಳ ಉತ್ಪನ್ನಗಳ ಮಾರುಕಟ್ಟೆ ಕುಸಿಯತೊಡಗಿತ್ತು.
ಮಾರುಕಟ್ಟೆ ಕುಸಿತದೊಟ್ಟಿಗೆ ಇತರೆ ಅನೇಕ ಕಾರಣಗಳಿಂದ ಮಿಲ್ ನಷ್ಟ ಅನುಭವಿಸಲಾರಂಭಿಸಿದವು. ಅಂತಿಮವಾಗಿ ಇಡೀ ದಾವಣಗೆರೆಯಲ್ಲಿ ಜವಳಿ ಮಿಲ್‌ಗಳ ಸೈರನ್‌ನ ಸದ್ದು ಮೊಳಗುವುದೇ ನಿಂತು ಹೋಯಿತು. ಮಿಲ್‌ಗಳು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರು ದುಡಿಮೆ ಕಳೆದು ಕೊಳ್ಳುವಂತಾಯಿತು. ಒಂದು ಕಾಲದಲ್ಲಿ ಪ್ರತಿಷ್ಠೆಯ ಸಂಕೇತವಾಗಿದ್ದಂತಹ ಕಾರ್ಮಿಕರ ಬದುಕು ದುಸ್ತರವಾಗತೊಡಗಿತು. ಮಿಲ್ ಉಳಿಸಿಕೊಳ್ಳಲು ನಡೆಸಿದ ಹೋರಾಟಕ್ಕೆ ಪ್ರತಿಫಲ ಸಿಗದಂತಾಯಿತು. ಕೆಲವೇ ಕೆಲ ವರ್ಷದ ಅಂತರದಲ್ಲಿ ದಾವಣಗೆರೆಯಲ್ಲಿ ಕಾಟನ್ ಮಿಲ್‌ಗಳ ಇದ್ದವು ಎಂಬ ಕುರುಹು ಇಲ್ಲದಂತಹ ವಾತಾವರಣ ನಿರ್ಮಾಣವಾಯಿತು.
ನೋಡ ನೋಡುತ್ತಿದ್ದಂತೆ ಕರ್ನಾಟಕದ ಮ್ಯಾಂಚೆಸ್ಟರ್… ಎಂಬ ಖ್ಯಾತಿ ಇತಿಹಾಸ ಪುಟದಲ್ಲಿ ಸೇರಿಯೇ ಬಿಟ್ಟಿತು. ಈಗ ದಾವಣಗೆರೆಯಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಆಗುತ್ತಿರುವ ಪರಿಣಾಮ ಮೇ ದಿನದ ಸೊಬಗು ಕಡಿಮೆ ಆಗುತ್ತಿದೆ. ಅದ್ಧೂರಿಯಾಗಿ ಆಚರಿಸಲ್ಪಡುತ್ತಿದ್ದ ಮೇ ದಿನ ಈಗಲೂ ಜನಮಾನಸದಲ್ಲಿ ಹಸಿರಾಗಿದೆ. ಕಾರ್ಮಿಕ ದಿನದ ಆಚರಣೆಯ ಗತ ವೈಭವ… ಈಗ ಕಂಡು ಬರದಂತಾಗಿದೆ. ಹಿಂದಿನ ವೈಭವದಂತೆ ಅಲ್ಲದಿದ್ದರೂ ಕಾರ್ಮಿಕ ದಿನದ ಆಚರಣೆ ನಿಂತಿಲ್ಲ. ಕಾರ್ಮಿಕರ ಪರ ಗಟ್ಟಿ ಧ್ವನಿ ಮೊಳಗುವುದು ನಡೆದೇ ಇದೆ. ಈ ಬಾರಿ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೇ 1 ರಂದು ನಡೆಯಬೇಕಿದ್ದ ದಿನಾಚರಣೆ ಮುಂದೂಡಲ್ಪಟ್ಟಿದೆ.
-ರಾ. ರವಿಬಾಬು