ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧೀನದಲ್ಲಿ ಬರುವ ಮಂಡಳಿಗಳಿಗೆ ಸಂಬಂಧಿಸಿದ ಬಾಕಿ ಉಳಿದ ಅರ್ಜಿಗಳು ಅಥವಾ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಕಾರ್ಮಿಕ ಅದಾಲತ್ 2.0 ಸಂಚಾರಿ ವಾಹನಕ್ಕೆ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಜಯಪುರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಜಿ.ಕುರುವತ್ತಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಜಂಟಿಯಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ನ್ಯಾಯಾಧೀಶ ಜಿ.ಜಿ.ಕುರುವತ್ತಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಜುಲೈ 16ರಿಂದ ಆಗಸ್ಟ್ 15ರವರೆಗೆ ಜಾಗೃತಿ ಅಭಿಯಾನ ನಡೆಸಯಲಿದೆ ಎಂದರು.
ಕಾರ್ಮಿಕ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಇರುವ ಎಲ್ಲ ಅರ್ಜಿಗಳು ಅಥವಾ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರ, ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ ಕಾರ್ಮಿಕ ಅದಾಲತ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ನೀಲಮ್ಮ ಖೇಡಗಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯನಿರ್ವಾಹಕ ಎಸ್.ನಾಗರಾಜ, ಕಾರ್ಮಿಕ ಇಲಾಖೆ ಸಿಬ್ಬಂದಿ ಹರ್ಷಾ ಪಾಯಗೊಂಡ ಇದ್ದರು.