ಬೆಂಗಳೂರು: ಮಕ್ಕಳಲ್ಲಿ ಆವಿಷ್ಕಾರ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ನೂತನವಾಗಿಆರಂಭಿಸಲಾಗಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮಹತ್ವದ ಪಾತ್ರವಹಿಸುತ್ತದೆ ಮತ್ತು ಆವಿಷ್ಕಾರ ಮನೋಭಾವನೆ ಬೆಳೆಸುತ್ತದೆ ಎಂದರು.
ಪ್ರತಿ ಶಾಲೆಯಲ್ಲೂ ಸ್ಥಾಪನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೆಲ ಶಾಲೆಗಳಲ್ಲಿ ಸ್ಥಳಾಭಾವ ಇದ್ದರೆ ವಿಶಾಲ ಜಾಗವಿರುವ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಕ್ಲಷ್ಟರ್ ಮಾದರಿಯಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.
ಕಿರಿಯ ಮತ್ತು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರಾಜ್ಯದ ಶೈಕ್ಷಣಿಕ ಸ್ವರೂಪವೇ ಆಮೂಲಾಗ್ರವಾಗಿ ಬದಲಾಗುತ್ತದೆ. ಬೆಂಗಳೂರು ಜಗತ್ತಿನ ಟಾಪ್ ಹತ್ತು ನಗರಗಳ ಸ್ಥಾನದಲ್ಲಿದ್ದು, ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು ಎಂದು ಹೇಳಿದರು.
ಪ್ರಾಥಮಿಕ ಹಂತದಿಂದಲೇ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಿರುತ್ತದೆ. ಬಹು ವಿಷಯಗಳನ್ನು, ಬಹಭಾಷೆಗಳನ್ನು ಕಲಿಯುವ ಶಕ್ತಿ ಮಕ್ಕಳಿಗೆ ಹೆಚ್ಚಾಗಿರುತ್ತದೆ. ಕೆಲ ದೇಶಗಳಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ ಉಪಗ್ರಹಾಧರಿತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಕಲಿಕೆ ಹಾಗೂ ಬೋಧನೆಯಲ್ಲಿಉಪಗ್ರಹಗಳ ಪಾತ್ರವಿದೆ. ಶಾಲೆಗಳಲ್ಲೇ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಇದೇ ಸುಧಾರಣೆ ನಮ್ಮಲ್ಲೂ ಆಗುತ್ತಿದ್ದು, ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಲ್ಯಾಬ್ ರಚಿಸಲು ಡೆಲ್ ಟೆಕ್ನಾಲಜೀಸ್ ನೆರವು ನೀಡಿದೆ. ಹೀಗೆ ಸರ್ಕಾರದ, ಸಮಾಜದ ಕೆಲಸಗಳಲ್ಲಿ ಖಾಸಗಿ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕ್ಷೇತ್ರ ಉದಾರವಾಗಿ ಮುಂದೆ ಬರಬೇಕು ಎಂದು ಕೋರಿದರು.