ಚಿಕ್ಕಮಗಳೂರು: ಕ್ಯಾರ್ ಚಂಡಮಾರುತದ ಪರಿಣಾಮ ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.
ಭಾರಿ ಗಾಳಿಗೆ ಕೊಪ್ಪ ತಾಲೂಕಿನ ಬಾಳೆ ಖಾನ್ ಎಸ್ಟೆಟ್ ಬಳಿ ಮರಬಿದ್ದು ಹಸುವೊಂದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬಿರುಗಾಳಿ ಪರಿಣಾಮವಾಗಿ ಬೃಹತ್ ಗಾತ್ರದ ಮರ ಧರೆಗುರುಳಿ ಬಿದ್ದು ಹಸು ಸಾವನ್ನಪ್ಪಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೂ ಭಾರಿ ಗಾಳಿ ಮಳೆಯಾಗುತ್ತಿದ್ದು, ಜಾವಳಿಯಲ್ಲಿ ಮಳೆ ಗಾಳಿಗೆ ಕಂಬವೊಂದು ಮುರಿದು ಬಿದ್ದಿದೆ. ಅಲ್ಲೇ ಹೋಗುತ್ತಿದ್ದ ಶಿಕ್ಚಕಿ ತಾರಾ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆಯ ಅಬ್ಬರಕ್ಕೆ ಹೇಮಾವತಿ ನದಿಯು ತುಂಬಿ ಹರಿಯುತ್ತಿದ್ದು, ಬಂಕೇನಹಳ್ಳಿ ಕಾಲುಸಂಕ ಕೊಚ್ಚಿ ಹೋಗಿದೆ. ಎರಡು ತಿಂಗಳ ಹಿಂದಿನ ಮಳೆಗೆ ಇಲ್ಲಿನ ಸೇತುವೆ ನೀರು ಪಾಲಾಗಿತ್ತು. ನಂತರದಲ್ಲಿ ಸ್ಥಳಿಯರೇ ಸೇರಿ ಕಾಲುಸಂಕ ನಿರ್ಮಿಸಿದ್ದರು. ಈಗ ಆ ಕಾಲುಸಂಕವೂ ಕೊಚ್ಚಿ ಹೊಗಿದೆ.
ಇದರಿಂದಾಗಿ ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸಂಪರ್ಕ ಕಡಿತವಾಗಿದೆ. ಭಾರಿ ಮಳೆಯಿಂದಾಗಿ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಭಾರಿ ಬಿರುಗಾಳಿಗೆ ಕೊಟ್ಟಿಗೆ ಹಾರದ ರಾಮಚಂದ್ರ ಗೌಡ, ಅತ್ತಿಗೆರೆಯ ಅಶ್ವಥ್ ಎಂಬವವರ ಮನೆಯ ಹಂಚುಗಳು ಹಾರಿ ಹೋಗಿವೆ. ಮಳೆ, ಗಾಳಿಯಿಂದಾಗಿ ಈ ಭಾಗದ ಜನರು ಭಾರಿ ನಷ್ಟ ಅನುಭವಿಸಿದ್ಧಾರೆ.