ಕೊರಟಗೆರೆ: ದಕ್ಷಿಣ ಭಾರತದ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25 ಸಾವಿರಕ್ಕೂ ಅಧಿಕ ಆಂಜನೇಯ ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಿಂದ ನಡೆಯಿತು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವು ಕಳೆದ 4ವರ್ಷಗಳ ನಂತರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಆಂಜನೇಯ ಸ್ವಾಮಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ದಾನಿಗಳಿಂದ ಪ್ರಸಾದ ಮತ್ತು ಸಕಲ ಸೌಲಭ್ಯವನ್ನು ಕಲ್ಪಿಸಿದ್ದರು.
ಆಂಜನೇಯ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಜ.27ರಿಂದ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಿ ಅಂಕುರಾರ್ಪಣೆ, ಗಜೇಂದ್ರ ಮೋಕ್ಷ, ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ, ಮೈಲಿಗೆ ರಥೋತ್ಸವ, ಮಂಟಪೋತ್ಸವ, ವಸಂತೋತ್ಸವ, ಪಲ್ಲಕ್ಕಿ ಉತ್ಸವ, ಗರುಡೋತ್ಸವ, ಗಜವಾಹನ ಮತ್ತು ಮಹಾಭಿಷೇಕವು ಫೆ.6ಕ್ಕೆ ಮುಕ್ತಾಯವಾಗಿ ಸತತ 12 ದಿನಗಳ ಕಾಲ ವಿಶೇಷವಾಗಿ ನಡೆಯಲಿವೆ.
ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಬ್ರಹ್ಮ ರಥೋತ್ಸವ ಹಾಗೂ ದೇವಾಲಯಕ್ಕೆ ಹೂವಿನ ಅಲಂಕಾರ ಮತ್ತು ಪ್ರಸಾದ ವಿನಿಯೋಗ, ಭೀಮಸಂದ್ರ ಮಹೇಶ್ ಆಂಜನೇಯ ಸ್ವಾಮಿಯ ವಿಗ್ರಹ ಮತ್ತು ಗರ್ಭಗುಡಿಗೆ ವಿಶೇಷ ಹೂವಿನ ಅಲಂಕಾರ, ಹತ್ತಾರು ಭಕ್ತಾಧಿಗಳಿಂದ 20 ಕ್ಕೂ ಅಧಿಕ ಕಡೆಗಳಲ್ಲಿ ವಿಶೇಷವಾಗಿ ಪ್ರಸಾದ ವಿನಿಯೋಗ ಮಾಡಿದ್ದರು. ಕೊರಟಗೆರೆ ಸಿಪಿಐ ಸುರೇಶ್ ಪಿಎಸೈ ಚೇತನ್ ಕುಮಾರ್ ಮತ್ತು ಪಿಎಸ್ಐ ರೇಣುಕಾ ಯಾದವ್ ನೇತೃತ್ವದಲ್ಲಿ ವಿಶೇಷವಾಗಿ ಬಂದೋಬಸ್ತ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
Related Articles
ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್, ಅರ್ಚಕರಾದ ಕೃಷ್ಣಚಾರ್, ಗೋಕುಲ, ಮುಖಂಡರಾದ ಜಿ.ವಿ.ರಾಮಮೂರ್ತಿ, ಜಯರಾಂ, ಕವಿತಾ, ನಂಜುಂಡಯ್ಯ, ಶ್ರೀನಿವಾಸ್, ಪ್ರಕಾಶ್, ಶಶಿಕುಮಾರ್, ಉಮಶಂಕರ್, ರಂಗನಾಥ, ಮರುಡಪ್ಪ, ವೆಂಕಟೇಶ್ ಸೇರಿದಂತೆ ಸಾವಿರಾರು ಭಕ್ತಾಧಿಗಳು ಆಂಜನೇಯ ಸ್ವಾಮಿಯ ದರ್ಶನ ಪಡೆದರು.
ಮೂಲ ಸೌಲಭ್ಯ ವಿಫಲ..
ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ರಸ್ತೆಯಲ್ಲಿ ಕನಿಷ್ಠ ನೀರಿನ ವ್ಯವಸ್ಥೆಯನ್ನು ಮಾಡಿರಲಿಲ್ಲ. ದರ್ಶನ ಪಡೆಯುವಾಗ ಭಕ್ತರು ಗಂಟೆ ಗಟ್ಟಲೇ ಬಿಸಿಲಿನಲ್ಲೇ ನಿಂತು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದರು. ಕ್ಯಾಮೇನಹಳ್ಳಿ ಗ್ರಾಪಂ ಮತ್ತು ಮುಜರಾಯಿ ಇಲಾಖೆಯು ಸಾವಿರಾರು ಭಕ್ತರಿಂದ ತೆರಿಗೆ ಮತ್ತು ಕಾಣಿಕೆ ರೂಪದಲ್ಲಿ ಹಣ ಶೇಖರಣೆ ಮಾಡಿಯೂ ಸಹ ಭಕ್ತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ.
25 ಕೋಟಿಗೂ ಅಧಿಕ ವಹಿವಾಟು ಸ್ಥಗೀತ..
2019 ಮತ್ತು 2020 ರಲ್ಲಿ ಮಾತ್ರ ಕ್ಯಾಮೇನಹಳ್ಳಿಯ ದನಗಳ ಜಾತ್ರೆಯು ನಡೆದಿದೆ. 2021 ಮತ್ತು 2022ರಲ್ಲಿ ಕೊರೊನಾ ರೋಗದಿಂದ ದನಗಳ ಜಾತ್ರೆಯು ಸ್ಥಗೀತವಾಗಿತ್ತು. 2023 ರಲ್ಲಿ ಚರ್ಮಗಂಟು ರೋಗದ ಕಾರಣದಿಂದ ಪ್ರಸ್ತುತ ವರ್ಷವು ದನಗಳ ಜಾತ್ರೆಯು ಸ್ಥಗೀತವಾಗಿದೆ. 15ದಿನಗಳ ಕಾಲ ನಡೆಯುವ ದನಗಳ ಜಾತ್ರೆಯು ಸ್ಥಗೀತವಾದ ಕಾರಣ ಸರಿ ಸುಮಾರು 25 ಕೋಟಿಗೂ ಅಧಿಕ ಜಾನುವಾರುಗಳ ವಹಿವಾಟು ಕುಂಠಿತವಾಗಿದೆ.
ಜಯಮಂಗಲಿ-ಗರುಡಾಚಲ ನದಿ ಸಂಗಮ ಸೇರುವ ಪವಿತ್ರ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿಯ ಶಕ್ತಿಯಿದೆ. ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಪೂಜಾ ವಿಧಿವಿಧಾನ ನಡೆಯಿತು. ಹತ್ತಾರು ಭಕ್ತರಿಂದಲೇ ಅನ್ನದಾನ ಮತ್ತು ಪ್ರಸಾದ ವಿನಿಯೋಗ ನಡೆದಿದೆ.
– ರಾಮಚಾರ್. ಅರ್ಚಕರು. ಆಂಜನೇಯ ದೇವಾಲಯ. ಕ್ಯಾಮೇನಹಳ್ಳಿ