Advertisement

KUWJ; ಪತ್ರಕರ್ತರು ಕರ್ಮ ಸಿದ್ಧಾಂತ ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿ: ಸಿಎಂ

03:43 PM Feb 03, 2024 | Team Udayavani |

ದಾವಣಗೆರೆ: ಮೌಢ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ದಾವಣಗೆರೆಯಲ್ಲಿ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ, ನೀವೇ ಪರಿಶೀಲಿಸಿ ಬರೆಯಿರಿ. ಏನನ್ನಾದರೂ ಪ್ರಕಟಿಸುವ ಮೊದಲು ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು.

ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟಭದ್ರರನ್ನು ಗುರುತಿಸಿ ಬರೆಯಿರಿ. ಇದರಿಂದ ಸಮಾಜಮುಖಿ ಪತ್ರಕೋದ್ಯಮ ಸಾಧ್ಯ ಎಂದರು.

ಹಣವಂತರು, ಅತೀ ಶ್ರೀಮಂತರ ಕೈಯಲ್ಲಿ ಪತ್ರಿಕೋದ್ಯಮ ಸಿಲುಕಿದೆ.  ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ, ಬಡವರ ಹಿತಾಕ್ತಿಗೆ ವಿರುದ್ಧವಾಗಿ ಬರೆಯುವ ಅಪಾಯ ಇರುತ್ತದೆ. ಇದನ್ನು ಪರಿಶೀಲಿಸಿಕೊಳ್ಳಿ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು, ಬೆಂಬಲಿಸುವವನು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಘನತೆ ತರುವಂತೆ ಮಾಡಬೇಕು ಎಂದು ವಿನಂತಿಸಿದರು.

Advertisement

ಸ್ವಾತಂತ್ರ್ಯಾ ಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವವನ್ನು ಕಾಯುವ, ರಕ್ಷಿಸುವ ಆಶಯ ಪ್ರಮುಖವಾಗಿದೆ ಎಂದು ವಿವರಿಸಿದರು.

ಜನ ಸಾಮಾನ್ಯರು ಪತ್ರಿಕಾವೃತ್ತಿ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಈಗ ತಂತ್ರಜ್ಞಾನ, ವಿಜ್ಞಾನ ಬಹಳ ಬೆಳೆದಿದ್ದು ಇದರ ಪ್ರಯೋಜನವನ್ನು ಪತ್ರಿಕಾವೃತ್ತಿ ಬಳಸಿಕೊಳ್ಳಬೇಕಿದೆ. ಆದರೆ ಸತ್ಯನಿಷ್ಠೆಯನ್ನು ಯಾವುದೇ ಕಾರಣಕ್ಕೂ ಪತ್ರಕರ್ತರು ಬಿಡಬಾರದು ಎಂದರು.

ಪತ್ರಿಕಾ ವೃತ್ತಿ ಸಮಾಜದ ಅಸಮಾನತೆ ಹೋಗಲಾಡಿಸಲು, ಅವಕಾಶ ವಂಚಿತರ ಪರವಾಗಿ, ಮೀಸಲಾತಿಯ ಆಶಯಗಳ ಪರವಾಗಿ ಇರಬೇಕು. ಇದರಿಂದ ಸಾಮಾಜಿಕ ನ್ಯಾಯಯನ್ನು ದ್ವನಿ ಇಲ್ಲದವರಿಗೆ ಕೊಡಲು ಸಾಧ್ಯ. ಹೀಗಾದಾಗ ಬಸವಣ್ಣನವರ ಸಮ ಸಮಾಜದ ಆಶಯ ಈಡೇರಲು ಸಾಧ್ಯ. ಪತ್ರಕರ್ತರು ಇದಕ್ಕೆ ಪೂರಕವಾಗಿ ವಸ್ತುನಿಷ್ಠವಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಈ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಸಹಯೋದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು KUWJ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು.

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಮಾಯ್ಕೊಂಡ ಬಸಂತಪ್ಪ, ಡಿ.ಜಿ.ಶಾಂತನಗೌಡರು, ಇನ್ ಸೈಟ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಜಿ.ಬಿ.ವಿನಯ್ ಕುಮಾರ್ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next