Advertisement

ಕುವೈಟ್‌: ಭಾರತೀಯ ಎಂಜಿನಿಯರುಗಳ ಸಮಸ್ಯೆಗೆ ಕೇಂದ್ರ ಮೌನ

07:30 AM Mar 25, 2018 | Team Udayavani |

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯ ಎಂಜಿನಿಯರುಗಳು ಅಲ್ಲಿನ ಆಡಳಿತ ವ್ಯವಸ್ಥೆ ರೂಪಿಸಿರುವ ಹೊಸ ಶೈಕ್ಷಣಿಕ ಅರ್ಹತೆಯ ನಿಯಮದಿಂದಾಗಿ ಎದುರಿಸುತ್ತಿರುವ ಸಮಸ್ಯೆಯ ಕುರಿತಾಗಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಒಂದು ವಾರ ಕಳೆದರೂ ಸ್ಪಂದಿಸಿಲ್ಲ; ಆದರೆ ಕೇರಳ ರಾಜ್ಯ ಸರಕಾರ ಸ್ಪಂದಿಸಿದೆ.

Advertisement

ಕುವೈಟ್‌ನಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಎಂಜಿನಿಯರುಗಳ ವಾಸ್ತವ್ಯದ ಪರವಾನಿಗೆಯನ್ನು ನವೀಕರಿಸಬೇಕಾದರೆ ಅವರು ಕುವೈಟ್‌ ಎಂಜಿನಿಯರ್ ಸೊಸೈಟಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂಬುದಾಗಿ ಕುವೈಟ್‌ನ ಪಬ್ಲಿಕ್‌ ಅಥಾರಿಟಿ ಫಾರ್‌ ಮ್ಯಾನ್‌ಪವರ್‌ (ಪಿಎಎಂ) ಸಂಸ್ಥೆಯು ಹೊಸ ನಿಯಮವನ್ನು ಜಾರಿಗೊಳಿಸಿ ಮಾ. 11ರಂದು ಸುತ್ತೋಲೆ ಹೊರಡಿಸಿತ್ತು.
ಇದರಿಂದ ಕುವೈಟ್‌ನಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದವರೂ ಸೇರಿದಂತೆ 13,000ಕ್ಕೂ ಅಧಿಕ ಭಾರತೀಯ ಎಂಜಿನಿಯರುಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯೆ ಇಲ್ಲ
ಈ ವಿಷಯದಲ್ಲಿ ತತ್‌ಕ್ಷಣ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿ
ಕರ್ನಾಟಕದ ಕರಾವಳಿಯ ಅನಿವಾಸಿ ಎಂಜಿನಿಯರುಗಳ ಪರವಾಗಿ ಮಂಗಳೂರಿನ ಎಂಜಿನಿಯರ್‌ ಮೋಹನ್‌ದಾಸ್‌ ಕಾಮತ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮಾ. 16ರಂದು ಟ್ವೀಟ್‌ ಮಾಡಿದ್ದು, ಇದುವರೆಗೂ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಿಲ್ಲ. ಈ ಮಧ್ಯೆ ಕೇರಳ ರಾಜ್ಯ ಸರಕಾರವು ನೂತನ ಶೈಕ್ಷಣಿಕ ಅರ್ಹತೆಯ ನಿಯಮಾವಳಿ ಕುರಿತಂತೆ ಸ್ಪಷ್ಟೀಕರಣ ನೀಡುವಂತೆ ಕುವೈಟ್‌ನಲ್ಲಿರುವ ಭಾರತದ ರಾಯಭಾರಿಗೆ ಪತ್ರ ಬರೆದಿದೆ. 

ಹೊಸ ಶೈಕ್ಷಣಿಕ ಅರ್ಹತೆಯ ನಿಯಮದಿಂದಾಗಿ ತನ್ನ ರಾಜ್ಯದ ಹಲವಾರು ಎಂಜಿನಿಯರುಗಳು ಕುವೈಟ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕೇರಳದ ಶಾಸಕ ಸುರೇಶ್‌ ಕುರುಪ್‌ ಅವರು ಮನವಿಯ ಮೂಲಕ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಕುವೈಟ್‌ನಲ್ಲಿರುವ ಭಾರತದ ಎಂಬೆಸಿಗೆ ಪತ್ರ ಬರೆದು ಸ್ಪಷ್ಟನೆ ಕೋರಿದೆ.

ಸಾಮಾನ್ಯವಾಗಿ ನ್ಯಾಶನಲ್‌ ಬೋರ್ಡ್‌ ಆಫ್‌ ಅಕ್ರೆಡಿಟೇಶನ್‌ (ಎನ್‌ಬಿಎ) ನಿಂದ ಮಾನ್ಯತೆ ಪಡೆದಿರುವ ಕೋರ್ಸುಗಳಿಗೆ/ ಸಂಸ್ಥೆಗಳಿಗೆ ಎಲ್ಲ ದೇಶಗಳಲ್ಲಿ ಮನ್ನಣೆ ನೀಡಲಾಗುತ್ತದೆ. ಅಲ್ಲದೆ ಈ ಬಗ್ಗೆ ಸಂಬಂಧಪಟ್ಟ ದೇಶಗಳ ನಡುವೆ ಉದ್ಯೋಗಕ್ಕೆ ಸಂಬಂಧಿಸಿ ಒಡಂಬಡಿಕೆ ಏರ್ಪಟ್ಟಿರುತ್ತದೆ. ಆದ್ದರಿಂದ ಎನ್‌ಬಿಎ ಮಾನ್ಯತೆ ಇರುವ ಸಂಸ್ಥೆಗಳಿಂದ ಎಂಜಿನಿಯರಿಂಗ್‌ ಪದವಿ ಪಡೆದವರು/ ಪಾಸಾದ
ವರು ಉದ್ಯೋಗಕ್ಕಾಗಿ ಮತ್ತೂಂದು ಪರೀಕ್ಷೆ ಬರೆಯುವ ಆವಶ್ಯಕತೆ ಇರುವುದಿಲ್ಲ. ಭಾರತ ಸರಕಾರವು ವೃತ್ತಿಶಿಕ್ಷಣ ಸಂಸ್ಥೆಗಳಿಗೆ/ ಕೋರ್ಸುಗಳಿಗೆ ಎನ್‌ಬಿಎ ಅಕ್ರೆಡಿಟೇಶನ್‌ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು 2015 ಜನವರಿ ತಿಂಗಳಲ್ಲಿ. ಹಾಗಾಗಿ 2015ಕ್ಕಿಂತ ಮೊದಲು ಎಂಜಿನಿಯರಿಂಗ್‌ ಪದವಿ ಪಡೆದು ಪ್ರಸ್ತುತ ಕುವೈಟ್‌ನಲ್ಲಿ ನೌಕರಿ ಮಾಡುತ್ತಿರುವ ಎಂಜಿನಿಯರುಗಳು ಮಾತ್ರ ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ಅಂತಹವರಿಗೆ ಮತ್ತೂಮ್ಮೆ ಪರೀಕ್ಷೆಗೆ ಹಾಜರಾಗಬೇಕೆಂಬ ನಿಯಮದಿಂದ ವಿನಾಯಿತಿ ನೀಡುವಂತೆ ಕೇರಳ ಸರಕಾರವು ಕೇಂದ್ರ ಸರಕಾರದ ಮೇಲೆ ಒತ್ತಡ ತಂದಿದೆ ಎಂದು ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ವಿವರಿಸಿದ್ದಾರೆ. ಕೇರಳ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರಕಾರವೂ ಇದೇ ರೀತಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಕುವೈಟ್‌ನಲ್ಲಿರುವ ಮಂಗಳೂರಿನ ಎಂಜಿನಿಯರ್‌ ಮೋಹನ್‌ದಾಸ್‌ ಕಾಮತ್‌ ಮನವಿ ಮಾಡಿದ್ದಾರೆ.  

Advertisement

ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಭಾರತದ ಎಂಜಿನಿಯರುಗಳ ಸಮಸ್ಯೆಗೆ ಸ್ಪಂದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮಾಡಿ ಹಲವು ದಿನಗಳಾದರೂ ಕೇಂದ್ರ ಸರಕಾರ ಮೌನ ವಹಿಸಿರುವ ಬಗ್ಗೆ ಕಾಮತ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next