Advertisement

ಕುವೆಂಪು ಸಾಹಿತ್ಯ ಇಂದಿನ ಸಮಾಜಕ್ಕೆ ಜೀವಾಮೃತ

11:39 AM Feb 07, 2019 | |

ಮೈಸೂರು: ಕುವೆಂಪು ವ್ಯಕ್ತಿತ್ವ ಹಾಗೂ ಸಾಹಿತ್ಯ ಕಾಲ ಮತ್ತು ಕಾಲಧರ್ಮಕ್ಕೆ ಕನ್ನಡಿ, ಮುನ್ನುಡಿ, ಮಾರ್ನುಡಿಯೂ ಹೌದು ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಬಣ್ಣಿಸಿದರು.

Advertisement

ಜನಚೇತನ ಟ್ರಸ್ಟ್‌ ಹಾಗೂ ಗ್ರಾಮೀಣ ಟ್ರಸ್ಟ್‌ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ, ನೇಗಿಲಹಾಡು ವಿಶೇಷ ಸಂಚಿಕೆ ಹಾಗೂ ‘ಕಾಲಕ್ಕೆ ಕನ್ನಡಿ: ವಿಶ್ವ ಕವಿ ಕುವೆಂಪು’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಸಾಹಿತ್ಯ ಅಮೋಘ: ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಕುರಿತು ಸಾಕಷ್ಟು ಚರ್ಚೆ, ಜಿಜ್ಞಾಸೆಗಳು ನಡೆಯುತ್ತಿವೆ. ಆದರೆ, ಭಾರತ ಸಂವಿಧಾನದ ಆಶಯಗಳನ್ನು ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಅಮೋಘವಾಗಿ ಘೋಷಿಸಿದ್ದಾರೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಆಶಯಗಳನ್ನು ಪದ್ಯರೂಪಗಳಲ್ಲಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.

ಅತಿಶಯೋಕ್ತಿಯಲ್ಲ: ಕಾನ್ಮಲೆಗಳ ಮೇರು ಶಿಖರ, ಕಾಲಕ್ಕೆ ಕನ್ನಡಿ, ವಿಶ್ವಕವಿ ಎಂಬೆಲ್ಲ ವಿಶೇಷಣಗಳಿಗೆ ಕುವೆಂಪು ಅವರು ಅರ್ಹರೆನಿಸಿರುವರು. ಹೀಗಾಗಿ ವರ್ತಮಾನಕ್ಕೆ ಕುವೆಂಪು ಅವರಷ್ಟು ಪ್ರಸ್ತುತ ಲೇಖಕ ಮತ್ತೂಬ್ಬರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಕುವೆಂಪು ಅವರ ಪ್ರಸ್ತುತತೆ ಹೆಚ್ಚಿದೆ ಎಂದು ಹೇಳಿದರು.

ಅನೇಕ ರೀತಿಯಲ್ಲಿ ಮೃತಪ್ರಾಯವಾಗಿರುವ ಇಂದಿನ ಸಮಾಜವನ್ನು ಜೀವಾಮೃತಗೊಳಿಸಬೇಕಿದ್ದು, ಕುವೆಂಪು ಸಾಹಿತ್ಯಾಮೃತದಿಂದ ಅದು ಸಾಧ್ಯ. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

Advertisement

ಕನ್ನಡ, ಕನ್ನಡದ ವಿವಿಧ ಮುಖಗಳನ್ನು ತಿಳಿಯಲು ಕರ್ನಾಟಕ ಅರಿಯಲು ಕುವೆಂಪು ಅವರನ್ನು ಅಧ್ಯಯನ ಮಾಡಬೇಕಿದೆ. ಕನ್ನಡದ ವಿವೇಕಾನಂದ ರೆನಿಸಿರುವ ಅವರದು ಎಲ್ಲ ಅರ್ಥಗಳಲ್ಲಿಯೂ ವಿವೇಕವಾಣಿ ಎಂದರು.

ಜಾತಿ ಅಜ್ಞಾನದ ಕೊನೆ ಕೋಟೆ: ಸಮಾಜದಲ್ಲಿ ಮೌಡ್ಯ ತುಂಬಿ ತುಳುಕುತ್ತಿದ್ದು, ವೈಜ್ಞಾನಿಕ ಅಸ್ತ್ರದಿಂದ ಸೀಳುವ ಶಕ್ತಿ ಕುವೆಂಪು ಸಾಹಿತ್ಯದಲ್ಲಿದೆ. ನನ್ನ ಸಾಹಿತ್ಯ ಸಾಮಾಜಿಕ ಅಸ್ತ್ರವಾಗಿ ರೂಪುಗೊಂಡಿದೆ ಎಂದು ಕುವೆಂಪು ಹೇಳುತ್ತಿದ್ದರು. ಜಾತಿ, ಮತ ಅಜ್ಞಾನದ ಕೊನೆಯ ಕೋಟೆಗಳಿದ್ದಂತೆ ಅವನ್ನು ದಾಟುವುದು ಮಾತ್ರವಲ್ಲ ಉರುಳಿಸಬೇಕು. ಸಮುದಾಯವನ್ನು ಸಂಪ್ರದಾಯದಿಂದ ಪಾರು ಮಾಡಬೇಕು ಎಂದರು.

ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್‌.ಶೇಖರ್‌ ಮಾತನಾಡಿ, ಸರ್ವೋದಯ, ಅನಿಕೇತನ, ವಿಶ್ವಮಾನವ ಹೇಗೆ ಕರೆದರೂ ಎಲ್ಲರನ್ನೂ ಒಂದಾಗಿಸುವ ಯಮಶಕ್ತಿ ಕುವೆಂಪು ಅವರಿಗಿತ್ತು ಎಂದರು.

ಬರಹದಂತೆ ಬದುಕುವುದು ತುಂಬಾ ಕಷ್ಟ: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈಡಿ.ರಾಜಣ್ಣ ಮಾತನಾಡಿ, ಬರಹದಂತೆ ಬದುಕುವುದು ತುಂಬಾ ಕಷ್ಟ. ಅಂತೆಯೇ ಬದುಕಿ ಸರ್ವಕಾಲಕ್ಕೂ ಉಳಿದವರೂ ಕುವೆಂಪು ಅವರಾಗಿದ್ದಾರೆ ಎಂದು ಬಣ್ಣಿಸಿದರು.

ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಜನಚೇತನ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಎನ್‌.ಗೌಡ, ನೇಗಿಲಹಾಡು ಕುವೆಂಪು ವಿಶೇಷ ಸಂಚಿಕೆಯ ಸಂಪಾದಕ ರಾಜು ಬಿ .ಕನ್ನಲಿ, ಸಹ ಸಂಪಾದಕ ಡಾ.ಹೊಂಬಯ್ಯ ಹೊನ್ನಲಗೆರೆ, ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್‌.ತುಕಾರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next