ಕುಷ್ಟಗಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲವಾಗಿದ್ದ ಕೈ ಪಂಪ್
ಗಳು ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಿರುಪಯುಕ್ತವಾಗುತ್ತಿವೆ. ಒಂದು ದಶಕದ ಹಿಂದೆ ಹೊರಳಿ ನೋಡಿದರೆ, ಪ್ರತಿ ಹಳ್ಳಿಗಳಲ್ಲಿ ನೀರಿಗೆ ಆಶ್ರಯವಾಗಿದ್ದ ಈ ಕೈ ಪಂಪ್ ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಬಳಕೆಯಾಗದೇ ತುಕ್ಕು ಹಿಡಿಯುತ್ತಿವೆ.
ಈ ಮೊದಲು ‘ಕೈ ಪಂಪ್ ಎಲ್ಲಿರುವುದೋ ಅಲ್ಲಿದೆ ಆರೋಗ್ಯ’ ಸರ್ಕಾರದ ಘೋಷಣೆಯಾಗಿತ್ತು, ತೆರೆದ ಬಾವಿಯ ನೀರಿನ ಬದಲಿಗೆ ಕೈಪಂಪ್‌ನಿಂದ ಬರುವ ಶುದ್ಧ ನೀರನ್ನೇ ಕುಡಿಯಬೇಕು ಎಂದು ಸರ್ಕಾರ ಸಂದೇಶ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಗಳಿಸಿದ್ದವು. ಇದೀಗ ವಿದ್ಯುತ್ ಚಾಲಿತ ಕೊಳವೆ ಬಾವಿಗಳು ಬಂದಂತೆ, ಕೈಪಂಪ್
ಕೊಳವೆ ಬಾವಿಗಳಿಂದ ನೀರು ತರುವುದು ನಿಲ್ಲಿಸಲಾಗಿದೆ. ಆದರೆ ವಿದ್ಯುತ್ ಕೈ ಕೊಟ್ಟಾಗ ಮಾತ್ರ ಅನಿವಾರ್ಯವಾಗಿ ಕೈ ಪಂಪ್ ಗಳನ್ನು ಹುಡುಕಿಕೊಂಡು ನೀರು ತಂದುಕೊಳ್ಳುವುದು ಅನಿವಾರ್ಯ. ಇದನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಆಟಕ್ಕುಂಟು ಲೆಕಕ್ಕಿಲ್ಲ ಎಂಬಂತಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮಳೆ ಅಭಾವ, ಸತತ ಬರಗಾಲದಿಂದ ಅಂತರ್ಜಲ ಕ್ಷೀಣಿಸಿದ್ದು, ಕೈ ಪಂಪ್ ಗಳು ಅಂತರ್ಜಲ ನಿಲುಕದೇ ನಿರುಪಯುಕ್ತವಾಗಿದೆ. ಕೊಳವೆಬಾವಿಯ ನೀರಿನಲ್ಲಿ ಫ್ಲೋರೈಡ್ ಅಂಶ, ವಿಷಕಾರಿ ಆರ್ಸೆನಿಕ್ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಶುದ್ಧ ನೀರಿನ ಘಟಕಗಳು ಚಾಲ್ತಿಯಲ್ಲಿವೆ.
ಬದಲಾದ ಈ ಪರಿಸ್ಥಿತಿಯಲ್ಲಿ ಕೈ ಪಂಪ್ ಗಳ ಸುತ್ತಲೂ ಕೊಚ್ಚೆಯಾದರೂ ಸ್ವಚ್ಛಗೊಳಿಸಲು ಹೋಗಿಲ್ಲ. ಈ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿಸಲು ಕೈ ಪಂಪ್‌ನ ಮುಂದೆ ನರೇಗಾ ಯೋಜನೆಯಲ್ಲಿ ವೈಜ್ಞಾನಿಕವಾದ ಇಂಗು ಗುಂಡಿ ನಿರ್ಮಿಸಿ ಲಕ್ಷಾಂತರ ರೂ. ಸರ್ಕಾರದ ಬೊಕ್ಕಸಕ್ಕೆ ಖರ್ಚಾಗಿದೆ. ಆದರೆ ಬೊಗಸೆ ಮಳೆ ನೀರು ಮರುಪೂರಣಗೊಂಡಿಲ್ಲ.
ಈ ಕೈ ಪಂಪ್ ಗಳ ಬಳಕೆಯಿಂದ ನೀರಿನ ಮಿತವ್ಯಯವಾಗುತ್ತಿತ್ತು. ಆದರೀಗ ಬದಲಾದ ಯೋಜನೆ, ಯೋಚನೆಗಳಿಂದಾಗಿ ಕೈ ಪಂಪ್ ಗಳಿಗೆ ಆದ್ಯತೆ ಕಡಿಮೆಯಾಗಿದೆ. ಕೈ ಪಂಪ್ ಕೆಟ್ಟರೆ ಪುನಃ ದುರಸ್ತಿ ಭಾಗ್ಯ ಸಕಾಲದಲ್ಲಿ ಇಲ್ಲ. ದುರಸ್ತಿ ನಿರ್ವಹಣೆ ಸಿಬ್ಬಂದಿಯನ್ನು ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ.
ಗುಜರಿಯ ಸ್ಥಿತಿಯಲ್ಲಿ ದುರಸ್ತಿ ವಾಹನ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ನಿರ್ವಹಿಸುತ್ತಿದ್ದ, ಕೈ ಪಂಪ್ ದುರಸ್ತಿ ವಾಹನ ಇಲ್ಲಿನ ಸಣ್ಣ ನೀರಾವರಿ ಇಲಾಖೆ ಆವರಣದಲ್ಲಿರುವುದು ಕೈ ಪಂಪ್ ಕೊಳವೆಬಾವಿಗಲಿಗೆ ಮೂಕ ಸಾಕ್ಷಿಯಾಗಿದೆ. ಹಲವು ವರ್ಷಗಳಿಂದ ಚಾಲನೆ ಇಲ್ಲದೇ ನಿಂತಿರುವ ಈ ವಾಹನ ಇತ್ತ ಗುಜರಿಗೂ ಹೋಗದೇ ತುಕ್ಕು ಹಿಡಿಯುತ್ತಿದೆ.
ನಜೀರಸಾಬ್ ನೆನಪು
ಅಂದಿನ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಅಬ್ದುಲ್ ನಜೀರಸಾಬ್ ಅವರು, ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೊಳವೆಬಾವಿ ಯೋಜನೆ ಅನುಷ್ಠಾನಗೊಳಿಸಿದ್ದರು. ಈ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಕ್ರಾಂತಿಕಾರಕ ಬದಲಾವಣೆ. ಅವರು ಜನಸಾಮಾನ್ಯರಿಗೆ ನೀರ್ ಸಾಬ್ ಜನಜನಿತರಾಗಿದ್ದು, ಇದೀಗ ನೆನಪು ಮಾತ್ರವಾಗಿದೆ.
ಕೈ ಪಂಪ್‌ನ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಗ್ರಾಪಂಗೆ ವಹಿಸಲಾಗಿದೆ. ಕೈ ಪಂಪ್‌ನ ಉಪಯೋಗ ನಿರ್ವಹಣೆ ನಿಧಿ ಸರ್ಕಾರದಿಂದ ಗ್ರಾಪಂಗೆ ಜಮೆಯಾಗುತ್ತಿದೆ.
ಮಂಜುನಾಥ ,
ಸಹಾಯಕ ಅಭಿಯಂತರ,
ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆ ಕುಷ್ಟಗಿ
ಮಂಜುನಾಥ ,
ಸಹಾಯಕ ಅಭಿಯಂತರ,
ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆ ಕುಷ್ಟಗಿ
ಮಂಜುನಾಥ ಮಹಾಲಿಂಗಪುರ