ಕುಷ್ಟಗಿ: ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಒಟ್ಟು 60 ಕೋಟಿ ರೂ. ಅನುದಾನದಲ್ಲಿ 27 ಕೋಟಿ ರೂ. ಶಿಕ್ಷಣಕ್ಕಾಗಿ ಆದ್ಯತೆಯಾನುಸಾರ ವಿನಿಯೋಗಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿ ವಸತಿ ನಿಲಯ ಹಾಗೂ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭಲ್ಲಿ ಅವರು ಮಾತನಾಡಿದರು. ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಹೆಚ್ಚು ಅನುದಾನ ಮೀಸಲಿಡುವ ಉದ್ದೇಶ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎನ್ನುವುದಾಗಿದೆ. ಶಿಕ್ಷಣವೊಂದೇ ಜೀವನಕ್ಕೆ ಪರ್ಯಾಯವಾಗಿ ಉಳಿಯಲು ಸಾಧ್ಯವಿದೆ ಎಂದರು.
40 ಸಾವಿರಕ್ಕೂ ಅ ಧಿಕ ಟಿಇಟಿ ಪರೀಕ್ಷೆ ಬರೆದವರಲ್ಲಿ ಕೇವಲ 4 ಸಾವಿರ ಜನ ಆಯ್ಕೆಯಾಗಿದ್ದು, ಪ್ರತಿಭಾಶಾಲಿಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ಇಷ್ಟಿದ್ದರೂ, ಎಲ್ಲಾ ಮೂಲ ಸೌಕರ್ಯಗಳಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇರುವಷ್ಟು ಬದ್ಧತೆ ಸರ್ಕಾರದ ಸಂಸ್ಥೆಗಳಿಗೆ ಇರುವುದಿಲ್ಲ. ಮೈತ್ರಿ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 10,611 ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಎಂದರು.
776 ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಸದ್ಯ ಉದ್ಘಾಟನೆಯಾಗಿರುವ ಗ್ರಂಥಾಲಯ ಮೇಲಂತಸ್ತು ನಿರ್ಮಿಸಲಾಗುವುದು. ಕಾಲೇಜಿನ ಆಟದ ಮೈದಾನಕ್ಕೆ ನಿಡಶೇಸಿ ಕೆರೆ ಮರಂ ಮಣ್ಣನ್ನು ಹಾಕಿಸಿ ಸಮತಟ್ಟಾಗಿಸಿಕೊಡುವ ಭರವಸೆ ನೀಡಿದರು. ಅಡಿಟೋರಿಯಂನ್ನು 80 ಲಕ್ಷ ರೂ. ಅನುದಾನದಿಂದ ಪೂರ್ಣಗೊಳಿಸಲಾಗುವುದು. 10 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ ಗೋಡೆ ನಿರ್ಮಿಸುವ ಕುರಿತು ಪ್ರಸ್ತಾಪಿಸಿದರು.
ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು, ಪರೀಕ್ಷೆ ಮುಗಿಯುವವರೆಗೂ ಮೊಬೈಲ್, ಸಾಮಾಜಿಕ ಜಾಲ ತಾಣಗಳಿಂದ ದೂರವಿರಬೇಕು. ಸರ್ಕಾರ 371 (ಜೆ) ಕಲಂ ಅನ್ವಯ ಶಿಕ್ಷಣಕ್ಕೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದು, ಈ ವ್ಯವಸ್ಥೆಯಲ್ಲಿ ಸರ್ಕಾರದ ಸೌಕರ್ಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನಿಜವಾಗಲೂ ಅದೃಷ್ಟವಂತರು ಎಂದರು.
ತಾಪಂ ಉಪಾಧ್ಯಕ್ಷೆ ಮಂಜುಳಾ ಪಾಟೀಲ, ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ವಿಜಯಲಕ್ಷ್ಮೀ ಕಟ್ಟಿಮನಿ, ಎಇಇ ಅನಿಲ ಪಾಟೀಲ, ಶಿವಶಂಕರಗೌಡ ಕಡೂರು, ತಾಜುದ್ದೀನ್ ದಳಪತಿ, ಭೀಮಣ್ಣ ವಜ್ಜಲ್, ಪ್ರಾಚಾರ್ಯ ಬಿ.ಎಂ. ಕಂಬಳಿ ಇದ್ದರು.