ಕುಷ್ಟಗಿ: ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳೆದ ಆ. 22ರಿಂದ ಅಕ್ಕಿ, ರವೆ ಸೇರಿದಂತೆ ಆಹಾರ ಪದಾರ್ಥ ಪೂರೈಕೆಯಾಗದ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಹಾರ ಕೊರತೆ ಎದುರಾಗಿದ್ದು, ಸದ್ಯ ಮಕ್ಕಳಿಗೆ ಹಾಲು, ಮೊಟ್ಟೆ ಮಾತ್ರ ವಿತರಿಸಲಾಗುತ್ತಿದೆ.
ತಾಲೂಕಿನಲ್ಲಿ 392 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರು ಸೇರಿದಂತೆ ಒಟ್ಟು 44 ಸಾವಿರ ಸಂಖ್ಯೆಯಷ್ಟಿದೆ. ಕಳೆದ ಆ. 22ರಿಂದ ಅಕ್ಕಿ, ರವೆ, ಶೇಂಗಾ, ಹೆಸರು ಕಾಳು ಇತ್ಯಾದಿ ಆಹಾರ ಸಾಮಾಗ್ರಿ ಪೂರೈಕೆಯಾಗಿಲ್ಲ. ಸದ್ಯ ಅಂಗನವಾಡಿಗಳಿಗೆ ಹಾಲು, ಮೊಟ್ಟೆಯೇ ಅರೆ ಹೊಟ್ಟೆಯ ಆಹಾರವಾಗಿದೆ. ತಾಲೂಕಿನ ಎಲ್ಲಾ ಅಂಗನವಾಡಿಗಳಿಗೆ ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ಮಕ್ಕಳು, ಗರ್ಭಿಣಿಯರು ಹಾಗೂ ಬಾಣತಿಯರಿಗೆ ಆಹಾರ ಪೂರೈಸುವ ವ್ಯವಸ್ಥೆ ಇದ್ದು, ಜೂನ್‌ನಲ್ಲಿ ಆಹಾರ ಪದಾರ್ಥ ಪೂರೈಸಲಾಗಿದ್ದು, ಜುಲೈನಲ್ಲಿ ಅರೆ ಬರೆ ಪೂರೈಸಲಾಗಿದೆ. ಆಗಸ್ಟ್‌ನಲ್ಲಿ ಏನೂ ಇಲ್ಲ. ತಾಲೂಕಿನ ಬಹುತೇಕ ಕೇಂದ್ರಗಳಲ್ಲಿ ದಾಸ್ತಾನು ಖಾಲಿಯಾಗಿದೆ. ಈ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿರುವ ಬಿಸಿಯೂಟದ ಅಕ್ಕಿಯನ್ನು ಕಡ ತಂದು ಮಾಡುತ್ತಿದ್ದು, ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಈ ಪ್ರಯತ್ನಕ್ಕೆ ಮುಂದಾಗದೇ ಮಕ್ಕಳಿಗೆ ಹಾಲು, ಮೊಟ್ಟೆಯೇ ನೀಡಿ ದಿನದೂಡುತ್ತಿವೆ. ಗರ್ಭಿಣಿ ಹಾಗೂ ಬಾಣಂತಿಯರಿಗಾಗಿ ಇರುವ ಮಾತೃವಂದನಾ, ಮಾತೃಶ್ರೀ ಯೋಜನೆಯ ಫಲಾನುಭವಿಗಳು ಅಂಗನವಾಡಿ ಕೇಂದ್ರದತ್ತ ಸುಳಿದಿಲ್ಲ.
ಬ್ಯಾಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ 30ಕ್ಕೂ ಅಧಿಕ ಮಕ್ಕಳು, ಶಾಲಾ ಮಕ್ಕಳ ಜೊತೆಗೆ ಬಿಸಿಯೂಟ ಮಾಡುತ್ತಿದ್ದು, ಇದೀಗ ಈ ಶಾಲಾ ಮಕ್ಕಳಿಗೆ ಆಹಾರ ಕೊರತೆಗೆ ಕಾರಣವಾಗಿದೆ. ಈ ಕುರಿತು ಶಾಲೆಯ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಪ್ರತಿಕ್ರಿಯಿಸಿ ಒಂದೆರೆಡು ದಿನದ ಮಟ್ಟಿಗೆ ಈ ಪರಿಸ್ಥಿತಿ ಹೇಗಾದರೂ ನಿಭಾಯಿಸಬಹುದು ಎರಡು ವಾರ ಕಳೆದಿವೆ. ಅಂಗನವಾಡಿ ಕೇಂದ್ರದ ಮಕ್ಕಳು ಶಾಲೆಯ ಮಕ್ಕಳೊಂದಿಗೆ ಊಟ ಮಾಡುತ್ತಿದ್ದು ಬೇಡವೆನ್ನಲು ಮನಸ್ಸಾಗುವುದಿಲ್ಲ. ಈ ಕುರಿತು ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಲಕ್ಷ್ಮೇಶ್ವರ ಅವರನ್ನು ವಿಚಾರಿಸಿದರೆ ಆಹಾರ ಸರಬರಾಜಾಗಿಲ್ಲ ಎಂದು ಹೇಳುತ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಭಾರತೀಯ ಆಹಾರ ನಿಗಮಕ್ಕೆ ಆರ್‌ಟಿಜಿಎಸ್ ಮೂಲಕ ಕಳುಹಿಸಿದ ಮೊತ್ತವನ್ನು ಕಾರಣಾಂತರಗಳಿಂದ ಆರ್‌ಬಿಐ ತಡೆ ಹಿಡಿದಿರುವ ಕಾರಣ ರಾಜ್ಯದ 36 ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ ಸ್ಥಗಿತಕ್ಕೆ ಕಾರಣವಾಗಿತ್ತು. ಇದೀಗ ಸರಿಯಾಗಿದೆ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸುವ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
•
ವೀರೇಂದ್ರ ನಾವದಗಿ,
ಸಿಡಿಪಿಒ ಕುಷ್ಟಗಿ