Advertisement

ಪತ್ನಿ ಆತ್ಮಹತ್ಯೆ ಮರುದಿನವೇ ಪಿತ್ರಾರ್ಜಿತ ಆಸ್ತಿ ಆಸೆಗಾಗಿ ಹೆತ್ತ ತಂದೆಯನ್ನೇ ಕೊಲೆಗೈದ ಮಗ

10:27 PM Feb 24, 2023 | Team Udayavani |

ಕುಷ್ಟಗಿ: ಪತ್ನಿ ಆತ್ಮಹತ್ಯೆ ಮರುದಿನವೇ ಪತಿ ಮಹಾಶಯ ತನ್ನ ಪಿತ್ರಾರ್ಜಿತ ಆಸ್ತಿ ಆಸೆಗೆ ತನ್ನ ತಂದೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಸಹಜ ಸಾವೆಂದು ನಾಟಕೀಯ ಸನ್ನಿವೇಶ ಸೃಷ್ಟಿಸಿದ ಘಟನೆ ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದಿದೆ.

Advertisement

ದ್ಯಾಮಣ್ಣ ಮುರುಡಿ(65) ಪಾಪಿ ಮಗ ಭೀಮಪ್ಪ ಮುರುಡಿಯಿಂದ ಹತನಾದ ದುರ್ದೈವಿ ತಂದೆ. ಈ ಕುಟುಂಬ ಹೊಲದಲ್ಲಿ ವಾಸವಾಗಿದ್ದು ಕಳೆದ ಗುರುವಾರ ಭೀಮಣ್ಣ ಮುರುಡಿ ಪತ್ನಿ ಮೀನಾಕ್ಷಿ ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂದರ್ಭದಲ್ಲಿ ತೋಟದ ಮೂರು ಎಕರೆ ಜಮೀನು ಇಬ್ಬರು ಮೊಮ್ಮಕ್ಕಳ ಹೆಸರಿಗೆ ಮಾಡುವ ಬಗ್ಗೆ ದ್ಯಾಮಣ್ಣ ಮುರುಡಿ ಊರವರಿಗೆ ಹಾಗೂ ಸೊಸೆಯ ಮನೆಯವರಿಗೆ ವಾಗ್ದಾನ ಮಾಡಿದ್ದ. ತನ್ನ ಇಬ್ಬರು ಮಕ್ಕಳಿಗೆ ಆಸ್ತಿ ಮಾಡಿದರೆ ತನಗೇನು ದಕ್ಕುವುದಿಲ್ಲ ಎಂದು ಮನೆಯಲ್ಲಿದ್ದ ತಂದೆ ದ್ಯಾಮಣ್ಣ ನನ್ನು ಮಗ ಭೀಮಣ್ಣ ಕತ್ತು ಹಿಸುಕಿ ಕೊಂದು ಹಾಕಿ, ಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದ. ದ್ಯಾಮಣ್ಣನ ಸಾವು ಸಂಶಯಾಸ್ಪದವಾಗಿದ್ದರಿಂದ ಆರೋಪಿ ಭೀಮಣ್ಣ ಮುರುಡಿಯನ್ನು ಕುಷ್ಟಗಿ ಪೊಲೀಸರ ವಿಚಾರಣೆಗೆ ಒಳಪಡಿಸಿದಾಗ ಪಿತ್ರಾರ್ಜಿತ ಆಸ್ತಿ ಸಲುವಾಗಿ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡದ್ದು ಸದ್ಯ ಆರೋಪಿ ಭೀಮಣ್ಣ ಮುರಡಿಯನ್ನು ಬಂಧಿಸಲಾಗಿದೆ.

ಇದ್ದೊಬ್ಬ ತಾಯಿ ಆತ್ಮಹತ್ಯೆ, ಆಸರೆಯಾಗಿದ್ದ ಅಜ್ಜನ ಕೊಲೆ, ಪಾಲಕ ತಂದೆ ಜೈಲು ಪಾಲಾಗಿರುವುದು ಇಬ್ಬರು ಗಂಡು ಮಕ್ಕಳು ಅಕ್ಷರಶಃ ಅನಾಥರಾಗಿರುವುದು ನಿಜಕ್ಕೂ ಘನಘೋರ ದುರಂತವಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next