ಕುಷ್ಟಗಿ : ಕುಷ್ಟಗಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಪ್ರಯಾಣಿಕರ ಸೋಗಿನಲ್ಲಿ ನಡೆಯುತ್ತಿರುವ ಕಳ್ಳರ ಕೈ ಚಳಕದಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಕುಷ್ಟಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಬಸ್ ನಿಲ್ದಾಣ ನವೀಕರಣ ಕಾಮಗಾರಿ ನಡೆದಿದೆ. ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದೇ ಕಳ್ಳರಿಗೆ ವರದಾನವಾಗಿದೆ, ಹೀಗಾಗಿ ಈ ಚಾಲಾಕಿ ಚೋರರ ಚಲನ ವಲನ ನಿಗಾವಹಿಸುವುದು ಅಸಾಧ್ಯವಾಗಿದೆ.
ಸಿಸಿ ಕ್ಯಾಮೆರಾ ಇಲ್ಲದೆ ಕಳ್ಳರಿಗೆ ಕಳ್ಳತನ ನಡೆಸಲು ಅನುಕೂಲವಾಗಿದೆ. ಸದ್ಯ ನಿಲ್ದಾಣಕ್ಕೆ ಬಂದು ಹೋಗುವ ಬಸ್ಸುಗಳಲ್ಲಿ ಪ್ರಯಾಣಿಕರು ಹತ್ತುವಾಗ ಇಳಿಯುವ ಸಂದರ್ಭದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪರ್ಸ್, ಮೋಬೈಲ್ ಕಳುವು ಮಾಡುತ್ತಿದ್ದಾರೆ. ಕಳೆದ ಗುರುವಾರ ಬಾಗಲಕೋಟೆಯಿಂದ ಕುಷ್ಟಗಿ ಬಸ್ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರು ಬಸ್ ನಿಂದ ಇಳಿಯುವ ವೇಳೆ ವ್ಯಾನೀಟಿ ಬ್ಯಾಗ್ ನಿಂದ ಪರ್ಸ್ ಎಗರಿಸಿದ ಪ್ರಕರಣ ನಡೆದಿದೆ. ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಕರ ಹಣ ದೋಚುವ ಪ್ರಕರಣಗಳಿಗೆ ಪೊಲೀಸರು ನಿಯಂತ್ರಿಸಬೇಕೆಂದು ಸ್ಥಳೀಯರ ಒತ್ತಾಯ ಕೇಳಿ ಬಂದಿದೆ.
ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ ಕೆಲ ದಿನಗಳ ಹಿಂದೆ ಗಜೇಂದ್ರಗಡ ಮೂಲದ ಕಳ್ಳನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ. ಆದಾಗ್ಯೂ ಈ ಪ್ರಕರಣ ಮತ್ತೆ ಆಗಿದ್ದು, ಇಂತಹ ಕಳ್ಳರ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ಭಾರಿ ಮಳೆಗೆ ಕೋಳಿ ಫಾರಂಗೆ ನುಗ್ಗಿದ ನೀರು: 9ಸಾವಿರ ಕೋಳಿಗಳ ಸಾವು