ಕುಷ್ಟಗಿ: ಪಟ್ಟಣದ ಕನಕದಾಸ ವೃತ್ತದಲ್ಲಿ ಗೂಡಂಗಡಿ ಸ್ಥಳಾಂತರಿಸಿದ್ದಾರೆಂದು ಆರೋಪಿಸಿ ಮಹಿಳೆ ವಿಷದ ಬಾಟಲಿ ಹಿಡಿದು ಹೈಡ್ರಾಮ ಸೃಷ್ಟಿಸಿದ ಘಟನೆ ನಡೆದಿದೆ.
ಇಲ್ಲಿನ ಕುಷ್ಟಗಿ- ಗಜೇಂದ್ರಗಡ ರಸ್ತೆಯ ಕನಕದಾಸ ವೃತ್ತದಲ್ಲಿ ಉದ್ದೇಶಿತ ಕನಕದಾಸರ ಮೂರ್ತಿ ಸ್ಥಾಪಿಸುವ ಹಿನ್ನೆಲೆಯಲ್ಲಿ ಅಲ್ಲಿನ ತಳ್ಳುಬಂಡಿ, ಗೂಡಂಗಡಿ ತೆರವುಗೊಳಿಸಲಾಗಿದೆ. ಗೂಡಂಗಡಿಗಳ ಪೈಕಿ ಲಕ್ಷ್ಮೀಬಾಯಿ ಟಕ್ಕಳಕಿ ಅವರ ಗೂಡಂಗಡಿ ತೆರವುಗೊಳಿಸಿದ್ದರಿಂದ ಸಿಟ್ಟಿಗೆದ್ದ ಮಹಿಳೆ ಸ್ಥಳಾಂತರಿಸಿದ ಗೂಡಂಗಡಿಯಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದಳು. ಪೊಲೀಸರು ಮನವೊಲಿಕೆಗೆ ಯತ್ನಿಸಿದರೂ ಜಗ್ಗದ ಮಹಿಳೆ ಲಕ್ಷ್ಮೀದೇವಿ ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ಮುಂದುವರಿಸಿದ್ದಾಳೆ.
ಈ ಜಾಗ ಪಂಚಮ್ ಅವರಿಗೆ ಸೇರಿದ್ದು, ಅವರ ಜಾಗದಲ್ಲಿಟ್ಟುಕೊಂಡಿದ್ದು, ಯಾರೋ ತೆರವಿಗೆ ಅರ್ಜಿ ಸಲ್ಲಿಸಿದ್ದಾರೆ. ಯಾರು ಅರ್ಜಿ ಸಲ್ಲಿಸಿದ್ದಾರೆಂಬುದು ಗೊತ್ತಾಗಬೇಕು. ಪುರಸಭೆ ಮುಖ್ಯಾಧಿಕಾರಿ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಮುಂದುವರಿಸಿದ್ದಾರೆ.
ಈ ಕುರಿತು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಪ್ರತಿಕ್ರಿಯಿಸಿ, ಈ ಜಾಗ ಕಟ್ಟಿ ದುರ್ಗಾದೇವಿ ಟ್ರಸ್ಟ್ ಗೆ ಸೇರಿದ್ದು, ದಾಖಲೆ ಅವರ ಹೆಸರಲ್ಲಿದೆ. ಕೆಲವೇ ದಿನಗಳಲ್ಲಿ ಕನಕದಾಸ ಮೂರ್ತಿ ಸ್ಥಾಪಿಸಲು ಸಮಾಜದವರು ನಿರ್ಧರಿಸಿದ್ದು, ಅದು ಅವರ ಜಾಗವಾಗಿರುವುದರಿಂದ ಅವರಿಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.