ಕುಷ್ಟಗಿ: ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದ ಬಳಿ ಸರಣಿ ನಾಲ್ಕು ಅಂಗಡಿಗಳಲ್ಲಿ ಕಳವಾದ ಘಟನೆ ಜೂ.8ರ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಳ್ಳರು ಅಂಗಡಿಯ ತಗಡಿನ ಮೇಲ್ಚಾವಣೆ ಕೊರೆದು ಗುಟ್ಕಾ ಸಿಗರೇಟ್ ಸೇರಿದಂತೆ ಕೆಲ ವಸ್ತುಗಳಿಗೆ ಕನ್ನ ಹಾಕಿದ್ದಾರೆ ಎನ್ನಲಾಗಿದೆ.
ಕುಷ್ಟಗಿ ಬಸವೇಶ್ವರ ವೃತ್ತದಿಂದ ಕೂಗಳತೆಯ ದೂರದಲ್ಲಿರುವ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸೇರಿದ ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್, ಸಿದ್ದರಾಮಯ್ಯ ಹಿರೇಮಠ ಅವರಿಗೆ ಸೇರಿದ ಸಿದ್ದರಾಮೇಶ್ವರ ಹಾರ್ಡವೇರ್, ಮುಸ್ತಾಫಾ ಅನಾಸುರ್ ಅವರ ಅಹ್ಮದ್ ಸ್ವಿಟ್ಸ್, ಮಲ್ಲಿಕಾರ್ಜುನ ಗೌಡ ಕೋಳೂರು ಅವರ ಚಂದಾಲಿಂಗೇಶ್ವರ ಗೊಬ್ಬರ ಅಂಗಡಿಗಳಲ್ಲಿ ಕಳವಾಗಿದೆ.
ಈ ಪೈಕಿ ಅಹ್ಮದ್ ಸ್ವೀಟ್ಸ್ ಅಂಗಡಿಯಲ್ಲಿ 4,500ರೂ. ಮೌಲ್ಯದ ಆರ್ ಎಂ ಡಿ 4 ಬಾಕ್ಸ್, 6,500 ರೂ. ಮೌಲ್ಯದ ಕಿಂಗ್ ಸಿಗರೇಟ್ 40 ಪ್ಯಾಕೇಟ್, 17,000 ರೂ. ವಿಮಲ್ 1500 ಪ್ಯಾಕೇಟ್ ಕಳವಾಗಿದ್ದು, ಇನ್ನುಳಿದ ಅಂಗಡಿಗಳ ಗಲ್ಲ ಪೆಟ್ಟಿಗೆಯಲ್ಲಿ ಹಣಕ್ಕಾಗಿ ತಡಕಾಡಿದ್ದಾರೆ.
Related Articles
ಗುಟ್ಕಾ ತಿಂದು ಉಗುಳಿರುವ ಕಳ್ಳರು: ಮುಖ್ಯರಸ್ತೆಯಲ್ಲಿರುವ ಈ ಅಂಗಡಿಗಳಲ್ಲಿ ಈ ಮೊದಲು ಬೀಗ ಮುರಿದು, ಶಟರ್ಸ್ ಎಬ್ಬಿಸಿ ಕಳ್ಳತನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೇಲ್ಚಾವಣೆ ಕೊರೆದು, ಕಳವು ಮಾಡಿರುವುದು ವಿಶೇಷ.
ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್ ಗೆ ಪ್ರಯತ್ನಿಸಿದ್ದ ಮೇಲ್ಚಾವಣೆಯ ತಗಡಿನ ಅಡಿಯಲ್ಲಿ ಪ್ಲೈವುಡ್ ಬಂದೋಬಸ್ತ್ ಹಿನ್ನೆಲೆಯಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮೇಶ್ವರ ಹಾರ್ಡವೇರ್ ನಲ್ಲಿ ಹಗ್ಗ ಬಳಸಿ ಅಂಗಡಿಯೊಳಗೆ ಇಳಿದು ಅಹ್ಮದ್ ಸ್ವೀಟ್ಸ್ ನಲ್ಲಿ ಸಿಗರೇಟು, ಗುಟ್ಕಾ ಕಳವು ಮಾಡಿದ್ದು, ಮಾತ್ರವಲ್ಲದೇ ಗುಟ್ಕಾ ತಿಂದು ಉಗುಳಿದಿದ್ದಾರೆ. ಚಂದಾಲಿಂಗೇಶ್ವರ ಗೊಬ್ಬರ ಅಂಗಡಿಯಲ್ಲಿ ಗಲ್ಲ ಪೆಟ್ಟಿಗೆಯಲ್ಲಿ ಹುಡುಕಾಡಿದ್ದರೂ ಏನೂ ಸಿಕ್ಕಿಲ್ಲ.
ಸಿಸಿ ಕ್ಯಾಮರಾ ಸುಳಿವು?: ಕಳವಾದ ಅಂಗಡಿಗಳ ಹಿಂದೆ ಹಂಪನಾಳ ಶರಣಪ್ಪ ಅವರ ವೈನ್ಸ್ ಶಾಪ್ ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದರಿಂದ ಕಳ್ಳರ ಸುಳಿವು ಗೊತ್ತಾಗುವ ಸಾದ್ಯತೆಗಳಿವೆ.
ಚಂದಾಲಿಂಗೇಶ್ವರ ಗೊಬ್ಬರದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಕೆಲ ದಿನಗಳ ಹಿಂದೆ ಕ್ಯಾಮರಾ ವೈಯರ್ ತುಂಡಾಗಿದ್ದು, ಮಾಲೀಕರು ಮರುದುರಸ್ಥಿ ಮಾಡಿಸಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಕ್ರಮ ವಹಿಸಿದ್ದಾರೆ. ಈ ಅಂಗಡಿಗಳ ಕಳ್ಳತನ ವರ್ಷದಲ್ಲಿ ಒಂದಲ್ಲ ಎರಡು ಅಂಗಡಿಗಳಲ್ಲಿ ಕಳವಾಗುವುದು ಸಾಮಾನ್ಯವಾಗಿದೆ. ಈ ಭಾಗದ ಅಂಗಡಿಗಳಿಗೆ ಕಳ್ಳರು ಬೀಗರು ಬಂದಂತೆ ಬಂದು ಹೋಗುತ್ತಿರುವುದು ಅಂಗಡಿ ಮಾಲೀಕರಲ್ಲಿ ನಿರಾಸೆ ಮೂಡಿಸಿದೆ.