ಕುಷ್ಟಗಿ: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಎಂ. ಹಿರೇಮಠ ಅವರು ಜೆಡಿಎಸ್ ಗೆ ರಾಜಿನಾಮೆಗೆ ನಿರ್ಧರಿಸಿದ್ದಾರೆ. ಅವರ ಮುಂದಿನ ನಡೆ ಯಾವ ಪಕ್ಷದ ಕಡೆ ಎನ್ನುವುದು ಅಸ್ಪಷ್ಟವಾಗಿದೆ.
ಜೆಡಿಎಸ್ ಹೈಕಮಾಂಡ್ ಈಗಾಗಲೇ ತುಕಾರಾಮ್ ಸೂರ್ವೆ ಅವರನ್ನು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ನಿಯೋಜಿಸಿದೆ. ಇದಕ್ಕೆ ಸಿಎಂ ಹಿರೇಮಠ ಅವರ ಅಸಮಾಧಾನ ಇಲ್ಲ. ಆದರೆ ಜೆಡಿಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಶರಣಪ್ಪ ಕುಂಬಾರ ಅವರ ಏಕ ಪಕ್ಷೀಯ ಧೋರಣೆಗೆ ಪಕ್ಷ ತ್ಯಜಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಮುಂದಿನ ನಡೆ ಕಾಂಗ್ರೆಸ್, ಬಿಜೆಪಿ ಇಲ್ಲವೇ ಜನಾರ್ದನ ರಡ್ಡಿ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KPRP) ಎಂಬುದು ಸ್ಪಷ್ಟಪಡಿಸಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸಿಎಂ ಹಿರೇಮಠ ಅವರಿಗೆ ಟಿಕೇಟ್ ಕೊಡದೇ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಸಿ. ನೀರಾವರಿ ಸಹೋದರ ಶಿವಪ್ಪ ನೀರಾವರಿ ಅವರಿಗೆ ಟಿಕೇಟ್ ನೀಡಿತ್ತು. ಆದಾಗ್ಯೂ ಬೇಸರಿಸಿಕೊಂಡಿರಲಿಲ್ಲ. ಈ ಬಾರಿ ಟಿಕೇಟ್ ಆಕಾಂಕ್ಷಿ ಆಗದಿದ್ದರೂ ತುಕಾರಾಮ್ ಸೂರ್ವೆ ಅವರಿಗೆ ಬೆಂಬಲಿಸಿದ್ದರು. ಆದರೆ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಶರಣಪ್ಪ ಕುಂಬಾರ ಅವರ ಪಕ್ಷದಲ್ಲಿ ಅನಗತ್ಯ ಹಸ್ತಕ್ಷೇಪ, ತಾವೇ ಪಕ್ಷದ ಹೈಕಮಾಂಡ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ಸದರಿಯವರ ಬೇಸರಕ್ಕೆ ಕಾರಣವಾಗಿದೆ.
ಈಗಾಗಲೇ ಪಕ್ಷದ ತಾಲೂಕು ಅಧ್ಯಕ್ಷರಾಗಿದ್ದ ಬಸವರಾಜ ನಾಯಕ ಸಹ ಪಕ್ಷದಿಂದ ದೂರವೇ ಉಳಿದಿದ್ದು ಇತ್ತೀಚೆಗೆ ಅಭ್ಯರ್ಥಿ ತುಕಾರಾಂ ಸೂರ್ವೆ ಹಮ್ಮಿಕೊಂಡ ಪಂಚರತ್ನ ರಥ ಯಾತ್ರೆ ಕಾರ್ಯಕ್ರಮದಲ್ಲೂ ಸಿಎಂ ಹಿರೇಮಠ ಹಾಗೂ ಬಸವರಾಜ ನಾಯಕ ಪಾಲ್ಗೊಳ್ಳದೇ ಅಂತರ ಕಾಯ್ದುಕೊಂಡಿದರುವುದು ಜೆಡಿಎಸ್ ಪಕ್ಷಕ್ಕೆ ಮಗ್ಗಲು ಮುಳ್ಳಾಗಿದೆ.