ಕುಷ್ಟಗಿ: ನೂತನ ತಾಲೂಕು ಕೇಂದ್ರದ ಜಪದಲ್ಲಿರುವ ಹನುಮಸಾಗರದಲ್ಲಿ ಭಾನುವಾರ (ಮಾ.5) ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ ಜಿಲ್ಲೆ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಹಬ್ಬ ಸಂಭ್ರಮಕ್ಕೆ ಚಾಲನೆ ಸಿಗಲಿದೆ.
ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 38 ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿದ ಖ್ಯಾತೀಯ ಹನುಮಸಾಗರ ಇದೀಗ ತಾಲೂಕು ಕೇಂದ್ರದ ಜಪದಲ್ಲಿದೆ.
ಕಳೆದ ವಿಧಾನಸೌಧದ ಅಧಿವೇಶನದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 795ನೇ ಪ್ರಶ್ನೆಗೆ ಕಂದಾಯ ಸಚಿವ ಅರ್. ಅಶೋಕ ಅವರಿಂದ ಪರಿಶೀಲಿಸುವ ಪ್ರಸ್ತಾಪ ವ್ಯಕ್ತವಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಹನುಮಸಾಗರ ತಾಲೂಕು ಕೇಂದ್ರದ ಮಾನ್ಯತೆಯ ನಿರೀಕ್ಷೆಯ ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.5ರಿಂದ ನಡೆಯುತ್ತಿದ್ದು ಈ ಸಮ್ಮೇಳನದಲ್ಲಿ ಬೆಟ್ಟದ ಅಂಚಿನ ಹನುಮಸಾಗರ ತಾಲೂಕಾ ಕೇಂದ್ರದ ಕೂಗು ಪ್ರತಿಧ್ವನಿಸಲಿದೆ.
Related Articles
ಹನುಮಸಾಗರದಲ್ಲಿಯೇ ಇದು 2ನೇ ಜಿಲ್ಲಾ ಸಮ್ಮೇಳನ
ಹನುಮಸಾಗರದಲ್ಲಿಯೇ ನಡೆಯುತ್ತಿರುವ ಎರಡನೇ ಸಮ್ಮೇಳನ ಇದಾಗಿದೆ. ಆಗಿನ ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷತೆಯಲ್ಲಿ 2007ರಲ್ಲಿ ಡಿಸೆಂಬರ್ 29 ಹಾಗೂ 30 ರಂದು ಹನುಮಸಾರದಲ್ಲಿ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಾಂತೇಶ ಮಲ್ಲನಗೌಡ್ರು ಅಧ್ಯಕ್ಷತೆಯಲ್ಲಿ ಅರ್ಥಪೂರ್ಣ ಸಮ್ಮೇಳನ ನಡೆದಿತ್ತು.
ಇದಾದ ಬಳಿಕ ಮತ್ತೆ ಇದೇ ಗ್ರಾಮಕ್ಕೆ ಒಲಿದು ಬಂತು. 2021 ರ ಏಪ್ರೀಲ್ 1 ಹಾಗೂ 2 ರಂದು ನಿಗದಿಯಾಗಿದ್ದ ಸಮ್ಮೇಳನ ಕೊರೊನಾ ಎರಡನೇ ಅಲೆ ಭೀತಿಗೆ ಸಮ್ಮೇಳನ ಅನಿರ್ದಿಷ್ಟವಾದಿಗೆ ಮುಂದೂಡಲಾಗಿತ್ತು.
ಅರ್ಧಕ್ಕೆ ಮೊಟಕುಗೊಂಡಿದ್ದ ಸದರಿ ಸಮ್ಮೇಳನ ಅರ್ಧಕ್ಕೆ ಕೈ ಬಿಡಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಈ ಸಮ್ಮೇಳನ ಮುನ್ನೆಲೆಗೆ ಬಂದಿದೆ. ಬರೋಬ್ಬರಿ 16 ವರ್ಷಗಳ ಅಂತರದಲ್ಲಿ ಎರಡು ಜಿಲ್ಲಾ ಸಮ್ಮೇಳನದ ಕೀರ್ತಿ ಹನುಮಸಾಗರಕ್ಕೆ ಇದೆ.
ಡಾ.ಉದಯಶಂಕರ ಅವರ ಬಗ್ಗೆ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪೂರ ಗ್ರಾಮದವರಾದ ಕಾವ್ಯಾನಂದ ಸಿದ್ದಯ್ಯ ಪುರಾಣಿಕ ಅವರ ಸಹೋದರ ಮಗನಾದ ಇವರು, ಸೈಬರ್ ತಜ್ಞರಾಗಿರುವ ಡಾ.ಉದಯಶಂಕರ್ ಪುರಾಣಿಕ ಅವರ ಸರ್ವಾಧ್ಯಕ್ಷತೆಯನ್ನು ಅಲಂಕರಿಸಿದ್ದಾರೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಅಪಾರ ಜ್ಞಾನದ ಕಣಜ ಇವರಾಗಿದ್ದು ಬಹುರಾಷ್ಟ್ರೀಯ ಕಂಪನಿಯೊಂದರ 64 ದೇಶಗಳ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಜಿಲ್ಲೆಗೆ ಹೆಮ್ಮೆಯಾಗಿದೆ ಅಕ್ಷರ ಜಾತ್ರೆಯ ನುಡಿ ಸಂಭ್ರಮ ನಡೆಯಲಿದೆ.
-ಮಂಜುನಾಥ ಮಹಾಲಿಂಗಪುರ ಕುಷ್ಟಗಿ