ಕುಷ್ಟಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ಸೇವೆಯಲ್ಲಿರುವವರಿಗೆ ಹುದ್ದೆ ಕಾಯಂ ಮಾಡಲು ಆಗ್ರಹಿಸಿ ಅತಿಥಿ ಶಿಕ್ಷಕರ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಗಿಲ್ ವೃತ್ತದಲ್ಲಿ ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಭಟನಾ ನಿರತ ಉಪನ್ಯಾಸಕರು ನ್ಯಾಯ ಕೇಳುವುದು ಸೂಕ್ತವಿದೆ. ಸರ್ಕಾರ ಗಮನವಹಿಸಿ ಈ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದರು.
ನಂತರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು, ಬಸವೇಶ್ವರ ವೃತ್ತದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ಹೊರ ಹಾಕಿದರು. ನಂತರ ತಹಶೀಲ್ದಾರ ಕಚೇರಿ ಗೆ ಆಗಮಿಸಿ ತಹಶೀಲ್ದಾರ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಗೌರವಾಧ್ಯಕ್ಷ ಶಂಕರ ಕರಪಡಿ, ಅಧ್ಯಕ್ಷ ಶಂಕರ ಅಡವಿಬಾವಿ ಸೇರಿದಂತೆ ಕುಷ್ಟಗಿ, ತಾವರಗೇರಾ, ಹಿರೇವಂಕಲಕುಂಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.