ಕುಷ್ಟಗಿ: ಕುಷ್ಟಗಿ ಹಾಗೂ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಬಂಧಿತರಿಂದ 19 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೀಗ ಹಾಕಿದ ಮನೆಗಳ ಕಳ್ಳತನ ಮಾಡುವುದರಲ್ಲಿ ನಿಪುಣರಾಗಿದ್ದ ಕಳ್ಳರು ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕುಷ್ಟಗಿ ಪೊಲೀಸ್ ಠಾಣೆಯ ಹಿಂಭಾಗ ಮಾಜಿ ಸೈನಿಕ ಸುಭಾಷ್ ಮಡಿವಾಳರ ಮನೆ, ಚಂದ್ರಶೇಖರ ಲೇಔಟಿನ ನರ್ಸ್ ಮನೆ, ಕಾರ್ಗಿಲ್ ವೃತ್ತದಲ್ಲಿ ಬಸ್ ನಿರ್ವಾಹಕನ ಮನೆ ಹಾಗೂ ವಣಗೇರಾ ಸೇರಿದಂತೆ ತಾವರಗೇರಾ ಪಟ್ಟಣದಲ್ಲಿ ಮನೆಗಳಲ್ಲಿ ಕಳವು ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚಾಲಾಕಿ ಕಳ್ಳರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನವರಾಗಿದ್ದಾರೆ. ಸಿದ್ದರಾಮ್ ಪೂಜಾರಿ, ಗಂಗಾರಾಮ್ ಚೌವ್ಹಾಣ, ಗುಲಾಬ್ ಗಂಗಾರಾಮ್ ಚೌವ್ಹಾಣ ಕಳವು ಮಾಡಿ ಆಳಂದ ಹೀರಾಚಂದ ಪ್ರಕಾಶ ಪಾಟೀಲ್ ಗೆ ಮಾರಾಟ ಮಾಡಿದ್ದನ್ನು ಕುಷ್ಟಗಿ ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 340 ಗ್ರಾಂ ಬೆಳ್ಳಿ, ಅಂದಾಜು ಮೌಲ್ಯ 91,400 ರೂ.ನ 246 ಗ್ರಾಂ, ಚಿನ್ನ ಆಭರಣಗಳು ಅಂದಾಜು ಮೌಲ್ಯ, 13,26,500 ರೂ. ಅಂದಾಜಿಸಲಾಗಿದೆ. ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ 5 ಲಕ್ಷ ರೂ, ಬೆಲೆ ಬಾಳುವ ಕಾರು ಸೇರಿ ಒಟ್ಟು ಮೌಲ್ಯ 19,09,300 ರೂ. ಅಂದಾಜಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯಶೋಧಾ ವಂಟಿಗೋಡಿ, ಡಿವೈ ಎಸ್ಪಿ ಗಂಗಾವತಿ ಶೇಖರಪ್ಪ ಹೆಚ್., ಮಾರ್ಗದರ್ಶನದಲ್ಲಿ, ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ತಾವರಗೇರಾ ಠಾಣೆಯ ಪಿಎಸೈ ತಿಮ್ಮಣ್ಣ, ಕುಷ್ಟಗಿ ಠಾಣೆಯ ಪಿಎಸೈ ಮೌನೇಶ ರಾಠೋಡ್ ಹಾಗೂ ಪೊಲೀಸ್ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಿಗೋಡಿ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.