ಕುಷ್ಟಗಿ: ನಿವೃತ್ತ ಪಿಡಿಓ, ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರ್ ಫೆ.2 ರ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸೌಮ್ಯ ಸ್ವಭಾವದ ಬಸಪ್ಪ ಅಮ್ಮಣ್ಣನವರ್ ಮೂಲತಃ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮದವರು. ಪಿಡಿಓ ಅಧಿಕಾರಿ ನಿವೃತ್ತರಾಗಿ ಕುಷ್ಟಗಿ ಗದ್ದಿ ಲೇಔಟ್ ನಲ್ಲಿ ವಾಸವಾಗಿದ್ದರು. ರೈತ ಸಂಘದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು.
ಕಳೆದ ಜ.19ರಂದು ನಿವೃತ್ತ ಅರಣ್ಯಾಧಿಕಾರಿ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಹವಲ್ದಾರ ಅಕಾಲಿಕ ನಿಧನರಾದ ಬೆನ್ನಲ್ಲೇ, ಅದೇ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸಪ್ಪ ಶಿವಲಿಂಗಪ್ಪ ಅಮ್ಮಣ್ಣನವರ್ ನಿಧನರಾಗಿರುವುದು ರೈತ ಸಂಘಕ್ಕೆ ಭರಿಸಲಾಗದ ನಷ್ಟವಾಗಿದೆ.
ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಹವಲ್ದಾರ ನಿಧನರಾಗಿ 15 ದಿನಗಳ ಅಂತರದಲ್ಲಿ ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರ್ ನಿಧನರಾಗಿದ್ದು,ಈ ಸ್ನೇಹಿತರು ಸಾವಿನಲ್ಲಿ ಒಂದಾಗಿದ್ದಾರೆ.
Related Articles
ಮೃತರ ಅಂತ್ಯಕ್ರಿಯೆ ಕುಷ್ಟಗಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮಧ್ಯಾಹ್ನ 2 ಕ್ಕೆ ನಡೆಯಲಿದೆ.
ಮಲ್ಲಪ್ಪ- ಬಸಪ್ಪ ಎಂಬ ಜೋಡೆತ್ತು
ಪರಮಾಪ್ತ ಸ್ನೇಹಿತರಂತಿದ್ದ ಮಲ್ಲಪ್ಪ- ಬಸಪ್ಪ ಜೋಡೆತ್ತಿನ ಜೋಡಿಯಂತಿದ್ದರು. ಸ್ನೇಹಿತ ಅಧ್ಯಕ್ಷ ಮಲ್ಲಪ್ಪ ಹವಲ್ದಾರ ಅಕಾಲಿಕ ನಿಧನದಿಂದ ಕಂಗಾಲಾಗಿದ್ದ ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣನವರು ಮಾನಸಿಕವಾಗಿ ಬಹಳ ನೊಂದಿದ್ದರು. ಇವರು ಅತಿಯಾದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರೂ ರೈತ ಸಂಘದಲ್ಲಿ ಸಕ್ರೀಯರಾಗಿದ್ದರು.
ಕಳೆದ 15 ದಿನಗಳಲ್ಲಿ ನಮ್ಮ ಸಂಘದ ತಾಲೂಕು ಘಟಕದ ಅಧ್ಯಕ್ಷ-ಪ್ರಧಾನ ಕಾರ್ಯದರ್ಶಿಯನ್ನು ಕಳೆದುಕೊಂಡಿರುವುದು ರೈತ ಸಂಘದ ಸರ್ವನಾಶವಾದಂತೆ ಭಾಸವಾಗಿದೆ. ಇಂತಹ ಮುಂಚೂಣಿಯಲ್ಲಿದ್ದ ರೈತ ಮುಖಂಡರನ್ನು ರೈತ ಸಂಘ ಕಳೆದುಕೊಂಡಿದೆ ಎಂದು ಜಿಲ್ಲಾ ಅದ್ಯಕ್ಷ ನಜೀರಸಾಬ್ ಮೂಲಿಮನಿ ಶೋಕಿಸಿದ್ದಾರೆ.