ಕುಷ್ಟಗಿ: ಕುಷ್ಟಗಿ ಸಾಯಿ ಬಾಬಾ ದರ್ಶನಕ್ಕೆ ಹೋದಾಗ ಅಪ್ಪಿ ತಪ್ಪಿ ದೇಸಾಯಿಯವರ ಬಾವಿ ಕಡೆ ಹೋಗ ಬ್ಯಾಡ್ರಿ.. ಹಣಕಿ ಹಾಕಬ್ಯಾಡ್ರೀ…ಹೌದು ಕುಷ್ಟಗಿ ಪಟ್ಟಣದ ಹೊರವಲಯದ ಪುರಾತನ ದೇಸಾಯಿಯವರ ತೆರೆದ ಬಾವಿಯಲ್ಲಿ ನೀರು, ತ್ಯಾಜ್ಯ ಸಂಗ್ರಹದಿಂದ ತುಂಬಿಕೊಂಡಿದೆ.
ಈ ತೆರೆದ ಬಾವಿ ನೆಲದ ಮಟ್ಟದಿಂದ ಅಷ್ಟೇನು ಎತ್ತರದಲ್ಲಿ ಇಲ್ಲ. ಬಾವಿ ತುಂಬಾ ಆಳವಾಗಿದೆ. ಇತ್ತೀಚಿನ ಅತೀವೃಷ್ಟಿ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಿದೆ. ನೀರು ಬಳಕೆಯಾಗದ ಹಿನ್ನೆಲೆಯಲ್ಲಿ ಪಾಚಿಗಟ್ಟಿದೆ. ಕೆಲವು ಭಕ್ತಾದಿಗಳು ಹೂ, ಕಾಯಿ ಎಸೆದಿದ್ದು, ತ್ಯಾಜ್ಯವೂ ತೇಲುತ್ತಿದೆ. ತೆರೆದ ಬಾವಿಯ ಕೊಳಚೆ ನೀರಿನಿಂದ ಸೊಳ್ಳೆ ಕಾಟ ವಿಪರೀತವಾಗಿದೆ.
ಇದರ ಪಕ್ಕದಲ್ಲಿ ಬಾಲಕಿಯರ ವಸತಿ ನಿಲಯ, ಖಾಸಗಿ ಶಾಲೆ ಇದೆ. ಭಕ್ತಾದಿಗಳು ಪ್ರತಿ ಗುರುವಾರ ಸಾಯಿ ದೇವಸ್ಥಾನಕ್ಕೆ ಬರುತ್ತಿದ್ದು, ಜೊತೆಗೆ ಮಕ್ಕಳು ಸಹ ತೆರೆದ ಬಾವಿಯ ದಡದಲ್ಲಿ ಓಡಾಟ, ನೀರಿನಲ್ಲಿ ಕಲ್ಲು ಎಸೆಯುವ ಕುಚೇಷ್ಟೆಗಳಲ್ಲಿ ನಿರತರಾಗುವುದು ಕಂಡು ಬಂದಿದ್ದು ಈ ತೆರೆದ ಬಾವಿ ಅಪಾಯವನ್ನು ಅಹ್ವಾನಿಸುತ್ತಿದೆ. ಪುರಸಭೆಯವರು ಕಡೇ ಪಕ್ಷ ಅಪಾಯ ಸಂಭವಿಸುವ ಮೊದಲೇ ತೆರೆದ ಬಾವಿ ಸುತ್ತಲೂ ತಂತಿ ಬೇಲಿ, ಅಪಾಯದ ಸೂಚನ ಫಲಕ ಅಳವಡಿಸಬೇಕು. ಇಲ್ಲವೇ ಬಾವಿಯ ನೀರನ್ನು ಅಗ್ನಿಶಾಮಕ ದಳದವರು, ಇಟ್ಟಿಗೆ ತಯಾರಿಸುವವರು ಬಳಸಿ ಇದರಲ್ಲಿನ ನೀರು ಖಾಲಿ ಮಾಡಬೇಕು ಎಂದು ಸ್ಥಳೀಯ ವಕೀಲರಾದ ಯಮನೂರಪ್ಪ ಪೂಜಾರಿ ಆಗ್ರಹಿಸಿದ್ದಾರೆ.