ಕುಷ್ಟಗಿ: ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ಇಬ್ವರ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತನಾಗಿದ್ದು, ಮತ್ತೊಬ್ಬರಿಗೆ ತೀವ್ರ ಗಾಯವಾದ ಘಟನೆ ಕೊಪ್ಪಳ ರಸ್ತೆಯ ಡಾ.ಅನೂಪ್ ಶೆಟ್ಟಿ ಪೊಲೀಸ್ ಕಾಲೋನಿ ಬಳಿ ಆ.20ರ ಶುಕ್ರವಾರ ನಡೆದಿದೆ.
ದುರ್ಮರಣಕ್ಕೀಡಾದ ವ್ಯಕ್ತಿ ಕುಷ್ಟಗಿ ಪಟ್ಟಣದ ದೊಡ್ಡಪ್ಪ ಕಂಚಿ ಎಂದು ಗುರುತಿಸಲಾಗಿದೆ. ಇನ್ನೋರ್ವ ಕುಷ್ಟಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶೇಖರಪ್ಪ ಅಬ್ಬಿಗೇರಿ ಅವರಿಗೆ ಕೈ ಮುರಿದಿದೆ.
ಶುಕ್ರವಾರ ಎಂದಿನಂತೆ ಬೆಳಗಿನ ಜಾವ ಸುಮಾರು 5.30ಕ್ಕೆ ಕೊಪ್ಪಳ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದರು. ಡಾ.ಅನೂಪ್ ಶೆಟ್ಟಿ ಪೊಲೀಸ್ ಕಾಲೋನಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿಯಿಂದ ಐದಾರು ಅಡಿ ದೂರದಲ್ಲಿ ವ್ಯಾಯಾಮ ಮಾಡುತ್ತಿದ್ದರು. ಅದೇ ವೇಳೆ ಗದಗ- ವಾಡಿ ರೈಲ್ವೆ ಮಾರ್ಗದ ಕಾಮಗಾರಿಗೆ ಲಿಂಗಲಬಂಡಿಯಿಂದ ಮರಂ ಮಣ್ಣನ್ನು ಹೇರಿಕೊಂಡು ಬರುವ ಟಿಪ್ಪರ್ ಈ ವ್ಯಕ್ತಿಗಳ ಮೇಲೆ ಹರಿದು ದುರಂತ ಸಂಭವಿಸಿದೆ.
ನಿದ್ದೆ ಮಂಪರಿನಲ್ಲಿದ್ದ ಟಿಪ್ಪರ್ ಚಾಲಕ ಡಾ. ಅನೂಪ ಶೆಟ್ಟಿ ಕಾಲೋನಿಯ ರಸ್ತೆ ಎಂದು ಭಾವಿಸಿ ಏಕಾಏಕಿ ಟಿಪ್ಪರ್ ವಾಹನವನ್ನು ತಿರುಗಿಸಿದ ವೇಳೆ ಅಲ್ಲಿದ್ದ ಇಬ್ಬರ ಮೇಲೆ ಹರಿದಿದೆ.
ಟಿಪ್ಪರ್ ವಾಹನ ಹರಿದ ರಭಸಕ್ಕೆ ದೊಡ್ಡಪ್ಪ ಕಂಚಿ ಅವರ ದೇಹದ ಅರ್ಧ ಭಾಗ ಛಿದ್ರಗೊಂಡಿದೆ. ಅವರ ಶವ ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ಟಿಪ್ಪರ್ ವಾಹನ ಹನುಮಸಾಗರ ಮೂಲದ್ದು, ಚಾಲಕ ಲಕ್ಷ್ಮಣ ಭೋವಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.