ಯಕ್ಷಾಂಗಣ ಟ್ರಸ್ಟ್ ಈ ವರ್ಷ ಸಾಲಿಗ್ರಾಮ ಮೇಳದಲ್ಲಿ ಗಣಪತಿ ಪೆಟ್ಟಿಗೆ ಸಹಾಯಕರಾಗಿ ದುಡಿಯುತ್ತಿರುವ ಮುಳ್ಳಿಕಟ್ಟೆ ಕುಷ್ಟ ಯಾನೆ ಕೃಷ್ಣ ನಾಯ್ಕರಿಗೆ ಯಕ್ಷಾಂಗಣ ಪ್ರಶಸ್ತಿ ನೀಡುತ್ತಿದೆ .ಮಾ.24ರಂದು ಕೊಲ್ಲೂರು ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಕುಂದಾಪುರದ ಮುಳ್ಳಿàಕಟ್ಟೆಯಲ್ಲಿ 1952ರಲ್ಲಿ ಈಶ್ವರ ನಾಯ್ಕ – ದಾರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಕುಷ್ಟನವರು ಎರಡನೇ ತರಗತಿ ವಿದ್ಯಾಭ್ಯಾಸ ಮಾಡಿದವರು.ಹೊಟ್ಟೆಪಾಡಿಗಾಗಿ ಪ್ರಸಾದನ ಕಲೆಯಲ್ಲಿ ಪರಿಣತಿ ಪಡೆದು ನಾಲ್ಕೂವರೆ ದಶಕ ವಿವಿಧ ಮೇಳಗಳಲ್ಲಿ ದುಡಿದ ಇವರು ದೀರ್ಘ ಕಾಲ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳದಲ್ಲಿ ಕಲಾ ವ್ಯವಸಾಯ ಮಾಡಿದವರು. ಜಲವಳ್ಳಿ ವೆಂಕಟೇಶ ರಾವ್,ಶಿರಿಯಾರ ಮಂಜು ನಾಯ್ಕ, ಐರೋಡಿ ಗೋವಿಂದಪ್ಪ ,ನಗರ ಜಗನ್ನಾಥ ಶೆಟ್ಟಿ,ಅರಾಟೆ ಮಂಜುನಾಥ,ಹಳ್ಳಾಡಿ ಮಂಜಯ್ಯ ಶೆಟ್ಟಿ,ಕೋಟ ವೈಕುಂಠ,ಕುಮಟ ಗೋವಿಂದ ನಾಯ್ಕ ,ಮರವಂತೆ ನರಸಿಂಹದಾಸ,ನೆಲ್ಲೂರು ಮರಿಯಪ್ಪಾಚಾರ್,ಗುಂಡ್ಮಿ ಕಾಳಿಂಗ ನಾವಡ, ಸುಬ್ರಮಣ್ಯ ಧಾರೇಶ್ವರ, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಕೆಮ್ಮಣ್ಣು ಆನಂದ, ದುರ್ಗಪ್ಪ ಗುಡಿಗಾರ್ ಸಹಿತ ಮೂರು ತಲೆಮಾರಿನ ಕಲಾವಿದರ ಸಾಂಗತ್ಯದೊಂದಿಗೆ ಪಳ್ಳಿ ಸೋಮನಾಥ ಹೆಗ್ಡೆ,ಯಡಾಡಿ ಕರುಣಾಕರ ಶೆಟ್ಟಿ ಪಳ್ಳಿ ಕಿಶನ್ ಹೆಗ್ಡೆಯವರವರೆಗೆ ಎರಡು ತಲೆಮಾರಿನ ಯಜಮಾನರ ಮೆಚ್ಚುಗೆ ಗಳಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಕಾಯಕದಲ್ಲಿ ತೊಡಗಿದ್ದಾರೆ. ತೆರೆ ಮರೆಯ ಕಾಯಕಕ್ಕೆ ಕಲಾವಿದರ ಕೊರತೆ ಎದ್ದು ಕಾಣುತ್ತಿರುವಾಗ ಯಕ್ಷಾಂಗಣ ಟ್ರಸ್ಟ್ ಈ ಹಿರಿಯರನ್ನು ಗುರುತಿಸಿರುವುದು ಅರ್ಥಪೂರ್ಣ.
ಪ್ರೊ| ಎಸ್.ವಿ. ಉದಯ ಕುಮಾರ ಶೆಟ್ಟಿ