ಮಡಿಕೇರಿ: ಕುಶಾಲನಗರದ ಮಡಿಕೇರಿ ರಸ್ತೆಯ ರೆಸಾರ್ಟ್‌ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಜ್ರದ ಹರಳುಗಳು ಹಾಗೂ ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಚೋರರನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿಪಿಐ ಕುಶಾಲನಗರ ವೃತ್ತದ ಪೊಲೀಸ್ ಸಿಬಂದಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಡಿವೈಎಸ್‌ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಬಳಿಯ ನಿವಾಸಿ ಗುಜರಿ ವ್ಯಾಪಾರ ಮಾಡುತ್ತಿದ್ದ ಖಾಸಿಂ (32) ಹಾಗೂ ರೆಂಜಲಾ ಗ್ರಾಮದ ಮೊರತ್ತಿಗುಂಡಿ ಬಳಿಯ ಚಾಲಕ ಮೊಹಮ್ಮದ್ ಸಿರಾಜುದ್ದೀನ್ (37) ಬಂಧಿತರು. ಇವರ ಬಳಿಯಿಂದ 160 ಗ್ರಾಂ ತೂಕದ 8 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ ವಜ್ರದ ಹರಳುಗಳು, 2ಲಕ್ಷದ 23 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಗುಡ್ಡೆಹೊಸೂರು ಬಳಿಯ ರೆಸಾರ್ಟ್ ನಲ್ಲಿ ಕಳೆದ ಅ. 16ರಂದು ಕಳ್ಳತನ ನಡೆದಿತ್ತು. ಈ ಕುರಿತು ರೆಸಾರ್ಟ್ ಸಿಬಂದಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.