Advertisement

ಕುರುಕ್ಷೇತ್ರ ಸಂಭಾವನೆ ಸಂತ್ರಸ್ತರಿಗೆ: ನಿಖೀಲ್

09:49 AM Aug 13, 2019 | Suhan S |

ಹುಬ್ಬಳ್ಳಿ: ಕುರುಕ್ಷೇತ್ರ ಸಿನಿಮಾದ ನನ್ನ ಸಂಭಾವನೆಯನ್ನು ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ನೀಡುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಚಿತ್ರನಟ ನಿಖೀಲ್ ಕುಮಾರಸ್ವಾಮಿ ಹೇಳಿದರು.

Advertisement

ದೇವಿನಗರದ ಪ್ರವಾಹ ಪೀಡಿತರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಅಪಾರ ಹಾನಿಯಾಗಿದೆ. ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆ ಕೊಚ್ಚಿ ಹೋಗಿದೆ. ಜನರ ಬದುಕು ನರಕ ಸದೃಶವಾಗಿದೆ ಎಂದರು.

ಪ್ರವಾಹಕ್ಕೀಡಾದವರಿಗೆ ಜೆಡಿಎಸ್‌ ಯುವ ಘಟಕದಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಆಹಾರ ಧಾನ್ಯ, ಬ್ಲಾಂಕೆಟ್, ದಿನಬಳಕೆ ಸಾಮಗ್ರಿ ನೀಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜನರ ನೋವಿಗೆ ಸ್ಪಂದಿಸಬೇಕು. ರಾಜ್ಯದ ಸ್ಥಿತಿಗತಿ ಪರಿಶೀಲಿಸಿ ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಜನರ ಕಣ್ಣೀರೊರೆಸುವ ಕಾರ್ಯವಾಗಲಿ: ಮಾಜಿ ಶಾಸಕ ಎನ್‌.ಎಚ್. ಕೋನರಡ್ಡಿ ಮಾತನಾಡಿ, ಅಧಿಕಾರ ಪಡೆಯುವ ಮುನ್ನ ಇದ್ದ ತೀವ್ರತೆ ಈಗ ಬಿಜೆಪಿಯವರಿಗೆ ಇಲ್ಲ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಮಾಡಬೇಕಿದೆ. ಉಕ ಜನರ ಕಣ್ಣೀರೊರೆಸುವ ಕೆಲಸವನ್ನು ಸರಕಾರ ಮಾಡಬೇಕು. ಬೆಳೆ ಹಾನಿಗೆ ತ್ವರಿತಗತಿಯಲ್ಲಿ ರೈತರಿಗೆ ಪರಿಹಾರ ವಿತರಣೆಯಾಗಬೇಕು. ಸರಕಾರ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿದರು.

ನಿಖೀಲ್ ಕುಮಾರಸ್ವಾಮಿ ದೇವಿನಗರದಲ್ಲಿ ಪ್ರವಾಹ ಪೀಡಿತರ ನೋವನ್ನು ಆಲಿಸಿದರು. ಪಕ್ಷದ ವತಿಯಿಂದ ಪರಿಹಾರ ಸಾಮಗ್ರಿ ವಿತರಿಸಲಾಗುವುದು ಎಂಬ ಭರವಸೆ ನೀಡಿದರು. ಮಾಜಿ ಶಾಸಕ ಎನ್‌.ಎಚ್. ಕೋನರಡ್ಡಿ ಅವರು ಮಳೆಯಿಂದಾಗಿ ಶಾಲಾ ಸಾಮಗ್ರಿ ಕಳೆದುಕೊಂಡ ಮಕ್ಕಳಿಗೆ ಪುಸ್ತಕ ಖರೀದಿಗೆ ಹಣ ನೀಡಿದರು.

Advertisement

ಮುಖಂಡರಾದ ರಾಜಣ್ಣ ಕೊರವಿ, ನವೀನ ಮುನಿಯಪ್ಪನವರ, ಶ್ರೀಕಾಂತ ಬಡವಣ್ಣವರ, ಗಣಿ ಗಿರಣಿ, ನಾಗನಗೌಡ, ರಾಜು ಪೂಜಾರಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next