Advertisement

ಕ್ಯಾಂಪ್‌ ಗಳಿಗಿಲ್ಲ ಬಸ್‌: ಜನರ ಪರದಾಟ!

03:07 PM Feb 24, 2020 | Naveen |

ಕುರುಗೋಡು: ನಿತ್ಯ ಕೆಲಸಕ್ಕೆ ಓಡಾಡಲು ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲದೇ ಪರದಾಡಬೇಕಾದ ಸ್ಥಿತಿ ದೊಡ್ಡರಾಜ್‌ ಕ್ಯಾಂಪ್‌, ಶ್ರೀರಾಮಚಂದ್ರಾಪುರ ಕ್ಯಾಂಪ್‌ ಹಾಗೂ ಮಾರೆಮ್ಮ ಕ್ಯಾಂಪ್‌ ನಿವಾಸಿಗಳದ್ದಾಗಿದೆ.

Advertisement

ಎಂ. ಸೂಗೂರು ಗ್ರಾಪಂ ವ್ಯಾಪ್ತಿಯ ದೊಡ್ಡರಾಜ್‌ ಕ್ಯಾಂಪ್‌ 250 ಕುಟುಂಬಗಳು 1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯ ಶ್ರೀ ರಾಮಚಂದ್ರಾಪುರ ಕ್ಯಾಂಪ್‌ನಲ್ಲಿ 300 ಕುಟುಂಬಗಳು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಮತ್ತು ಮಾರೆಮ್ಮ ಕ್ಯಾಂಪ್‌ನಲ್ಲಿ 25 ಕುಟುಂಬಗಳು 7 ನೂರು ಜನಸಂಖ್ಯೆ ಹೊಂದಿವೆ.

ಈ ಮೂರು ಕ್ಯಾಂಪ್‌ಗ್ಳಿಂದ ನಿತ್ಯ ಎಮ್ಮಿಗನೂರು, ಕುರುಗೋಡು, ಕಂಪ್ಲಿ, ಬಳ್ಳಾರಿ, ಹೊಸಪೇಟೆ ಸೇರಿದಂತೆ ಇತರೆ ದೂರದ ತಾಲೂಕು, ಜಿಲ್ಲೆಗಳಿಗೆ 90ಕ್ಕೂ ಹೆಚ್ಚು ಪ್ರೌಢ ಶಿಕ್ಷಣ ಮತ್ತು ಪದವಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ತೆರಳುತ್ತಾರೆ. ಸಾರ್ವಜನಿಕರು ಹಾಗೂ ರೈತರು ವ್ಯವಹಾರ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಪಟ್ಟಣಗಳಿಗೆ ಹೋಗಲು ಬಸ್‌ಗಳ ಸೌಲಭ್ಯಗಳು ಇಲ್ಲದೆ ದಿನ ನಿತ್ಯ ಪರಿತಪ್ಪಿಸುತ್ತಿದ್ದಾರೆ.

1991-1992ರಲ್ಲಿ ಎಮ್ಮಿಗನೂರು ಮತ್ತು ಎಂ. ಸೂಗೂರು ಮಾರ್ಗವಾಗಿ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಅಂದಿನಿಂದ ಇಂದಿನವರೆಗೂ ಬಸ್‌ ಸೌಲಭ್ಯಗಳು ಕಾಣದೆ ರಸ್ತೆ ಬದಿಯಲ್ಲಿ ಗಂಟೆಗಟ್ಟಲೇ ನಿಂತು ಟಾಟಾ ಏಸ್‌ ಮತ್ತು ದ್ವಿಚಕ್ರ ವಾಹನ ಸವಾರರ ಆಸರೆ ಪಡೆದು ಬೇರೆ ಕಡೆ ತೆರಳಿ ಪ್ರತಿಯೊಂದು ಕೆಲಸಗಳನ್ನು ಮಾಡಿಕೊಂಡು ಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಮಕ್ಕಳು ಶಿಕ್ಷಣದಿಂದ ವಂಚಿತ: ಕ್ಯಾಂಪ್‌ಗ್ಳಲ್ಲಿ 1ರಿಂದ 5ನೇ ತರಗತಿವರೆಗೆ ಕ್ಲಾಸ್‌ಗಳು ನಡೆಯುತ್ತಿದ್ದು, ಪ್ರಾಥಮಿಕ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಸಮೀಪದ ಎಮ್ಮಿಗನೂರು, ಕಂಪ್ಲಿ, ಕುರುಗೋಡು ಪಟ್ಟಣಗಳಿಗೆ ತೆರಳಲು ಬಸ್‌ ಸೌಲಭ್ಯಗಳ ಇಲ್ಲದ ಕಾರಣ ಅನೇಕ ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಿಕ್ಷಣದಿಂದ ವಂಚಿತಗೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

Advertisement

ನೌಕರಸ್ಥರು ಮತ್ತು ವಿದ್ಯಾರ್ಥಿಗಳಿಗೆ ಬಸ್‌ ಕಾಯಲು ನಿಲ್ದಾಣದ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಮತ್ತು ಅಕ್ಕಪಕ್ಕದ ಮನೆಗಳ ನೆರಳಿನಲ್ಲಿ ನಿಂತು ವಾಹನಗಳನ್ನು ಕಾಯಬೇಕಾದ ಸ್ಥಿತಿ ಇದೆ. ಕ್ಯಾಂಪ್‌ಗ್ಳಿಗೆ ಅತ್ತ ಕಡೆ 3 ಕಿಮೀ ಹತ್ತಿರದಲ್ಲಿರುವ ಎಂ. ಸೂಗೂರು ಮತ್ತು ಇತ್ತ ಕಡೆ 2 ಕಿಮೀ ಹತ್ತಿರದಲ್ಲಿರುವ ಎಮ್ಮಿಗನೂರು ಗ್ರಾಮಗಳ ಮಾರ್ಗದಲ್ಲಿ ನಿತ್ಯ ಸರಕಾರಿ ಮತ್ತು ಖಾಸಗಿ ಬಸ್‌ ಗಳು ಓಡಾಡುತ್ತಿದ್ದು, ಸಂಬಂಧಿ ಸಿದ ಅಧಿಕಾರಿಗಳು ಕ್ಯಾಂಪ್‌ ಒಳಗೆ ಬಸ್‌ ಬಿಡಲು ಆದೇಶ ನೀಡುತ್ತಿಲ್ಲ ಎಂದು ಕ್ಯಾಂಪ್‌ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಶೀಘ್ರ ಮೂರು ಕ್ಯಾಂಪಿಗೂ ಬಸ್‌ ವ್ಯವಸ್ಥೆ ಮಾಡದಿದ್ದರೆ ಪ್ರತಿಯೊಂದು ಕುಟುಂಬಗಳು ಬೀದಿಗಿಳಿದು ಜಿಲ್ಲಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಸುಮಾರು ವರ್ಷಗಳಿಂದ ಕ್ಯಾಂಪಿಗೆ ಬಸ್‌ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಅನೇಕ ಬಾರಿ ಸಂಬಂಧಿ ಸಿದ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಪಿ. ಏಸುಬಾಬು, ಗ್ರಾಪಂ ಸದಸ್ಯ, ದೊಡ್ಡರಾಜ ಕ್ಯಾಂಪ್‌

2004ರಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಿ ಕ್ಯಾಂಪ್‌ಗೆ ಬಸ್‌ ವ್ಯವಸ್ಥೆ ಮಾಡಿಸಿದ್ದೀವಿ. ಕೇವಲ 3 ತಿಂಗಳ ಮಾತ್ರ ಬಂತು ನಂತರ ಬರಲಿಲ್ಲ. ಕೇಳಿದರೆ ಕ್ಯಾಂಪ್‌ಗ್ಳಲ್ಲಿ ಕಲೆಕ್ಷನ್‌ ಇಲ್ಲ ಎಂದು ಉತ್ತರ ನೀಡುತ್ತಿದ್ದಾರೆ. ಇದರಿಂದ ನೌಕರರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ನಿವಾಸಿಗಳಿಗೆ ತುಂಬ ತೊಂದರೆ ಅಗಿದೆ.
ಅರುಣ್‌ ಖರ್ಕಿ, ಮುಖ್ಯ ಶಿಕ್ಷಕರು,
ದೊಡ್ಡರಾಜ್‌ ಕ್ಯಾಂಪ್‌

ಕ್ಯಾಂಪಿಗೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಪ್ರೌಢಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ. ಇದಲ್ಲದೆ ದಿನನಿತ್ಯ ಪ್ರತಿಯೊಬ್ಬರು ಬೇರೆ ಕಡೆ ಹೋಗುವುದಕ್ಕೆ ತೊಂದರೆ ಆಗುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಕಾಲ್ನಡಿಗೆ ಕಷ್ಟ. ಆದ್ದರಿಂದ ಕ್ಯಾಂಪ್‌ ಒಳಗೆ ಬಸ್‌ಗಳ ಸಂಚಾರ ಅಗತ್ಯವಿದೆ.
ವೆಂಕಟರಾಜು,
ಶ್ರೀರಾಮಚಂದ್ರಾಪುರ ಕ್ಯಾಂಪ್‌ ನಿವಾಸಿ

„ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next