ನರಗುಂದ: ತಾಲೂಕಿನ ಕುರ್ಲಗೇರಿ ಗ್ರಾಮವು ಬೆಣ್ಣಿಹಳ್ಳದ ಪ್ರವಾಹಕ್ಕೆ ಸತತ ನಲುಗುತ್ತಿದೆ. ದಶಕಗಳಿಂದಲೂ ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ಪ್ರವಾಹ ಬರುತ್ತಲೇ ಇದೆ. ಈ ವರ್ಷದ ಮಳೆಗಾಲ ಪ್ರಾರಂಭವಾದ್ದರಿಂದ ಗ್ರಾಮಕ್ಕೆ ಮತ್ತೇ ಪ್ರವಾಹ ಭೀತಿಗೆ ಎದುರಾಗಿದೆ.
ಪಟ್ಟಣದಿಂದ 8 ಕಿಮೀ ದೂರದಲ್ಲಿ ಗದಗ ಒಳರಸ್ತೆಗೆ ಹೊಂದಿಕೊಂಡು ಕುರ್ಲಗೇರಿ ಗ್ರಾಮವಿದೆ. ಬೆಣ್ಣಿಹಳ್ಳದ ದಂಡೆಯಲ್ಲಿ ಇರುವುದರಿಂದ ಪ್ರವಾಹ ಹೆಚ್ಚಿಗೆ ಬಾಧಿಸುತ್ತದೆ. ನವಲಗುಂದ ತಾಲೂಕು ಮಾರ್ಗವಾಗಿ ಮೂಗನೂರ ಬಳಿ ನರಗುಂದ ತಾಲೂಕು ಪ್ರವೇಶಿಸುವ ಬೆಣ್ಣಿಹಳ್ಳ ಉಕ್ಕಿ ಹರಿದರೆ
ಮೊದಲು ಅತಂತ್ರ ಸ್ಥಿತಿಗೆ ಒಳಗಾಗುವುದೇ ಕುರ್ಲಗೇರಿ ಗ್ರಾಮ. ಬೆಣ್ಣಿಹಳ್ಳದ ನೀರು ಗ್ರಾಮದ ಅರ್ಧಕ್ಕೂ ಹೆಚ್ಚು ಭಾಗಕ್ಕೆ ವ್ಯಾಪಿಸುತ್ತದೆ. ನವಲಗುಂದ ಮತ್ತು ನರಗುಂದ ತಾಲೂಕು ಗಡಿಭಾಗದಲ್ಲಿರುವ ಈ ಗ್ರಾಮ ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತದೆ.
ನವಗ್ರಾಮ: 2009, 2011ರಲ್ಲಿ ಬೆಣ್ಣಿಹಳ್ಳದ ಪ್ರವಾಹದಿಂದ ನಲುಗಿದ ಕುರ್ಲಗೇರಿ ಗ್ರಾಮ ಸ್ಥಳಾಂತರಕ್ಕೆ ಅಂದಿನ ಶಾಸಕರಾಗಿದ್ದ ಸಿ.ಸಿ. ಪಾಟೀಲ ಅವರು ಆದಿಚುಂಚನಗಿರಿ ಮಠದ ಶ್ರೀಗಳಿಂದ ನೆರವು ಪಡೆದು ತಾಲೂಕಿನ ಮೂರು ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ 10 ಕೋಟಿ ವೆಚ್ಚದಲ್ಲಿ ಆಸರೆ ಯೋಜನೆ ಮನೆಗಳನ್ನು ನಿರ್ಮಿಸಿದ್ದರು. ಇದರಲ್ಲಿ ಕುರ್ಲಗೇರಿ ಗ್ರಾಮ ಸ್ಥಳಾಂತರಕ್ಕೆ 448 ಮನೆಗಳನ್ನು ನಿರ್ಮಿಸಲಾಯಿತು.
ದುರದೃಷ್ಟವಶಾತ್ ಸತತ ಪ್ರವಾಹ ಭೀತಿಗೆ ಒಳಗಾಗಿದ್ದರೂ ಕುರ್ಲಗೇರಿ ಸ್ಥಳಾಂತರಕ್ಕೆ ನಿರ್ಮಿಸಲಾದ ಆಸರೆ ಮನೆಗಳು ಇದುವರೆಗೂ ಪ್ರವಾಹ ಸಂತ್ರಸ್ತರಿಗೆ ಹಂಚಿಕೆಯಾಗಿಲ್ಲ. ಪರಿಣಾಮ 2011ರಲ್ಲೇ ನಿರ್ಮಿಸಲಾದ ಮನೆಗಳು ಇಂದು ಅವಸಾನದ ಅಂಚಿನತ್ತ ಸಾಗಿದ್ದು, ಆಸರೆ ಯೋಜನೆ ದುರ್ಗತಿಗೆ ನಿದರ್ಶನ ಎನ್ನಬಹುದು. ಕಳೆದ 5, 6 ತಿಂಗಳ ಹಿಂದೆ ಫಲಾನುಭವಿಗಳಿಗೆ ಮನೆ ವಾಸದ ಪಟ್ಟಾ ಬುಕ್ ವಿತರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮುಂಗಾರು ಪೂರ್ವ ಮಳೆ ಪ್ರಾರಂಭಗೊಂಡ ಈ ಹಂತದಲ್ಲಿ ಬೆಣ್ಣಿಹಳ್ಳ ಪ್ರವಾಹಕ್ಕೆ ನಲುಗಿದ ಕುರ್ಲಗೇರಿ ಗ್ರಾಮಕ್ಕೆ ಮತ್ತೇ ಪ್ರವಾಹ ಭೀತಿ ಎದುರಾಗಿದೆ. ಹಿಂದೆ ತಮ್ಮ ಅವಧಿಯಲ್ಲೇ ನಿರ್ಮಿಸಲಾದ ಆಸರೆ ಯೋಜನೆ ಮನೆಗಳ ಕ್ರಮಬದ್ಧವಾಗಿ ಹಂಚಿಕೆ ಮತ್ತು ಅಗತ್ಯ ಸೌಲಭ್ಯ ಒದಗಿಸುವಲ್ಲಿ ಶಾಸಕ ಸಿ.ಸಿ. ಪಾಟೀಲ ಅವರು ಮುಂದಾದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರು ನಿಟ್ಟುಸಿರು ಬಿಡುವಂತಾಗುತ್ತದೆ.
ಪ್ರವಾಹ ಭೀತಿ ನಿರಂತರ ಪ್ರತಿವರ್ಷ ಬೆಣ್ಣಿಹಳ್ಳ ಪ್ರವಾಹ ಭೀತಿ ಇದ್ದೇ ಇರುತ್ತದೆ. ಈಗಾಗಲೇ ಬೆಣ್ಣಿಹಳ್ಳದಲ್ಲಿ ನೀರು ಹರಿಯುತ್ತಿದೆ. ಮೇಲ್ಭಾಗ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಮತ್ತೇ ಗ್ರಾಮಕ್ಕೆ ತೊಂದರೆ ಆಗುತ್ತದೆ. ನವಗ್ರಾಮ ಫಲಾನುಭವಿಗಳಿಗೆ ಪಟ್ಟಾ ಬುಕ್ ವಿತರಣೆ ಮಾಡಿದ್ದು, ಅವುಗಳನ್ನು ಗ್ರಾಮ ಪಂಚಾಯತ್‌ನಲ್ಲಿ ಸೇರ್ಪಡೆ ಮಾಡಬೇಕು. ಇಲ್ಲಿ ಮೂಲ ಸೌಲಭ್ಯ ಒದಗಿಸಬೇಕಿದೆ.
ಫಕೀರಪ್ಪ ಮಾದರ, ಕುರ್ಲಗೇರಿ ಸಂತ್ರಸ್ತ