ಮುಂಬಯಿ: ವೇದಾಂತ ಫೌಂಡೇಷನ್ ಮೆರಿನ್‌ಲೈನ್ಸ್ ಮುಂಬಯಿ, ರೋಟರಿ ಕ್ಲಬ್ ಪೊವಾಯಿ ಮುಂಬಯಿ, ಟಾಟಾ ಮೋಟಾರ್ ಲಿಮಿಟೆಡ್ ಡಿ. ಲಿಂಕ್ (ಇಂಡಿಯಾ) ಲಿಮಿಟೆಡ್ ಹಾಗೂ ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಯೋಜನಾ ಸಮಿತಿಯ ಸಹಭಾಗಿತ್ವದಲ್ಲಿ ಬಂಟರ ಸಂಘ ಶಶಿಮನ್‌ಮೋಹನ್ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ಅಣ್ಣಲೀಲಾ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಹಾಗೂ ಶೋಭಾ ಜಯರಾಮ ಶೆಟ್ಟಿ ಬಿ. ಎಂ. ಎಸ್. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರದಲ್ಲಿ ವೃತ್ತಿಪರ ಕಂಪ್ಯೂಟರ್ ತರಬೇತಿ (ಐಟಿ) ಕೇಂದ್ರವು ಜೂ. 21 ರಂದು ಉದ್ಘಾಟನೆಗೊಂಡಿತು.
ಈ ತರಬೇತಿ ಕೇಂದ್ರವನ್ನು ರೋಟರಿ ಕ್ಲಬ್ ಪೊವಾಯಿ ಮುಂಬಯಿ ಇದರ ಅಧ್ಯಕ್ಷೆ ಶ್ರೀಮತಿ ಅಮಿತಾ ವೋರ, ಮಿರೇಕಾಲ್ ಅಧ್ಯಕ್ಷ ಹನುಮಾನ್ ತ್ರಿಪಾಠಿ, ವೇದಾಂತ ಫೌಂಡೇಷನ್ ಶಿಕ್ಷಣ ವಿಭಾಗದ ಪ್ರಬಂಧಕ ಸಚಿನ್ ಜಗತಪ್ ರಿಬ್ಬನ್ ಕತ್ತರಿಸಿ ಮೂಲಕ ಉದ್ಘಾಟಿಸಿದರು.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ ಸಂಘದ ಉನ್ನತ ಶಿಕ್ಷಣ ಯೋಜನಾ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಶಿಕ್ಷಕರಿಗಾಗಿ ವಿವಿಧ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಉನ್ನತ ಶಿಕ್ಷಣ ಸಮಿತಿಯು ಶ್ರಮಿಸುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗಳು ಶಿಕ್ಷಣ ಮುಗಿಸಿದಾಕ್ಷಣ ಉದ್ಯೋಗಕ್ಕೆ ಅರ್ಹರಾಗುವಂತೆ ಮಾಡಲು ವೃತ್ತಿಪರ ಕಂಪ್ಯೂಟರ್ ಐಟಿ ತರಬೇತಿ ಆವಶ್ಯಕವಾಗಿದ್ದು, ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಈ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಬಂಟರ ಸಂಘ ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್ ಅವರು ನುಡಿದರು.
ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್ ಮತ್ತು ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ ಅವರು ಮಾತನಾಡಿ, ವೃತ್ತಿಪರ ಕಂಪ್ಯೂಟರ್ ಐಟಿ ತರಬೇತಿಗೆ ಪ್ರೋತ್ಸಾಹ ನೀಡಿದ ವೇದಾಂತ ಫೌಂಡೇಷನ್, ರೋಟರಿ ಕ್ಲಬ್ ಪೊವಾಯಿ, ಟಾಟಾ ಮೋಟಾರ್, ಡಿ. ಲಿಂಕ್ ಲಿಮಿಟೆಡ್ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ರೋಟರಿ ಕ್ಲಬ್ ಪೊವಾಯಿ ಇದರ ಅಧ್ಯಕ್ಷೆ ಅಮಿತಾ ವೋರಾ ಮಾತನಾಡಿ, ಬಂಟರ ಸಂಘದ ಶಿಕ್ಷಣ ಸಂಸ್ಥೆಗಳಿಗೆ ರೋಟರಿ ಕ್ಲಬ್ ಸದಾ ಸಹಕಾರ ನೀಡಲು ಸಿದ್ಧವಾಗಿರುವುದಾಗಿ ಭರವಸೆ ನೀಡಿದರು. ಅಣ್ಣಲೀಲಾ ಕಾಲೇಜಿನ ಪ್ರಾಂಶುಪಾಲೆ ಡಾ| ಪದ್ಮಾ ದೇಶು¾ಖ್ ಸ್ವಾಗತಿಸಿದರು. ವೇದಾಂತ ಫೌಂಡೇಷನ್ ಪ್ರಾದೇಶಿಕ ಪ್ರಬಂಧಕ ಸಚಿನ್ ಜಗತಪ್ ಕಂಪ್ಯೂಟರ್ ಶಿಕ್ಷಣದ ಅಗತ್ಯತೆಯ ಬಗ್ಗೆ ವಿವರಿಸಿದರು. ಬಂಟರ ಸಂಘ ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಮಿತಿಯ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಶೆಟ್ಟಿ, ಅಣ್ಣಲೀಲಾ ಕಾಲೇಜಿನ ಪ್ರಾಂಶುಪಾಲೆ ಡಾ| ಪದ್ಮಾ ದೇಶ್‌ಮುಖ್, ಉನ್ನತ ಶಿಕ್ಷಣ ಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿ ಪ್ರಕಾಶ್ ಮೋರೆ, ಆರತಿ ಶಶಿಕಿರಣ್ ಶೆಟ್ಟಿ ಜ್ಯೂನೀಯರ್ ಕಾಲೇಜಿನ ಉಪ ಪ್ರಾಂಶುಪಾಲೆ ಶೈಲಾ ಶೆಟ್ಟಿ, ಆರ್‌ಪಿಎಚ್ ಕಾಲೇಜಿನ ಪ್ರಾಂಶುಪಾಲೆ ಸಂಯೋಜಿತಾ ಮೊರಾರ್ಜಿ, ರೋಟರಿ ಜಿಲ್ಲಾ ಕಾರ್ಯದರ್ಶಿ ದೀಪಕ್ ಜಿಂದಾನಿ, ಸುಶೀಲ್ ವಾರಿಯರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.