Advertisement

ಕುರ್ಕಾಲು : ಕೃಷಿ ಗದ್ದೆಗೆ ನುಗ್ಗಿದ್ದ‌ ಹೊಳೆಯ ಉಪ್ಪು ನೀರು

11:36 AM Jun 29, 2019 | sudhir |

ಕಟಪಾಡಿ: ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಅಂಬಡೆಪಾಡಿ, ಪಾಜೈ ಬಳಿ ಉಪ್ಪು ನೀರು ಗದ್ದೆಗೆ ನುಗ್ಗಿ ಕೃಷಿ ಬೆಳೆ ಹಾನಿಗೊಂಡಿದೆ. ಬಾವಿಯ ನೀರು ಕೂಡ ಉಪ್ಪಾಗಿದ್ದು, ಈ ಭಾಗದ ಕೃಷಿಕರು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

Advertisement

ಸಣ್ಣ ನೀರಾವರಿ ಇಲಾಖೆ ಎಡವಟ್ಟು?
ಕುರ್ಕಾಲು ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸಲಾಗಿದೆ. ಆದರೆ ಸ್ಥಳೀಯ ಕೃಷಿಕರನ್ನು, ಸ್ಥಳೀಯಾಡಳಿತವನ್ನು ಅಥವಾ ಮಳೆಯ ಬಗ್ಗೆ ಸಮರ್ಪಕವಾಗಿ ತಿಳಿಯದೇ ಅಣೆಕಟ್ಟಿನ ಹಲಗೆಯನ್ನು ಸಣ್ಣ ನೀರಾವರಿ ಇಲಾಖೆ ತೆಗೆಸಿದ್ದರಿಂದ ಈ ಸಮಸ್ಯೆ ತಲೆದೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿಯುವ ನೀರಿಗೆ ಪರದಾಟ
ಈ ಭಾಗದ ನೂರಾರು ಎಕರೆ ಗದ್ದೆಪ್ರದೇಶ ಸಹಿತ ಸ್ಥಳೀಯ ಬಾವಿಗಳಲ್ಲಿ ಉಪ್ಪು ನೀರಿನಂಶ ಸಂಗ್ರಹವಾಗಿದ್ದು, ಇನ್ನು ಕನಿಷ್ಠ ಮೂರರಿಂದ ನಾಲ್ಕು ವರ್ಷ ನದಿ ದಂಡೆಯ ನಿವಾಸಿಗಳ ಮನೆ ಬಾವಿ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂಬುದು ಈ ಭಾಗದ ಜನರ ಕೊರಗು.

ಈ ಬಾರಿ ಮಳೆ ತಡವಾಗಿದೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕಿಂಡಿ ಅಣೆಕಟ್ಟನ್ನು ತೆರೆಯಲಾಗಿದೆ. ಸುಮಾರು 50 ಎಕರೆ ಗದ್ದೆಯಲ್ಲಿ ಬಿತ್ತಲಾಗಿರುವ ಭತ್ತದ ಸಸಿ(ನೇಜಿ) ಯ ಬುಡವು ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಪುನಃ ಬೀಜ ಬಿತ್ತನೆ ಮಾಡಬೇಕಿದೆ ಎಂದು ಕೃಷಿಕರು ಹೇಳಿದ್ದಾರೆ.

ಉಪ್ಪು ನೀರು ನುಗ್ಗಿದ್ದ ಸಂದರ್ಭ ಮೀನುಗಳು ಸಾವಿಗೀಡಾಗಿದ್ದವು. ಈಗ ಕೃಷಿಗೂ ತೊಂದರೆಯಾಗಿದೆ. ಹೊಳೆಯ ನೀರಿನಿಂದಾಗಿ ಕಾರ್ತಿ ಬೆಳೆ ಆಗುತ್ತಿತ್ತು. ಆದರೆ ಈ ಬಾರಿ ಕೃಷಿ ಗದ್ದೆಯ ಚಟುವಟಿಕೆ ಇನ್ನೂ ಮುಗಿದಿಲ್ಲ.

Advertisement

ಎಲ್ಲದಕ್ಕೂ ಸಮಸ್ಯೆ
ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯುವಾಗ ಸ್ಥಳೀಯಾಡಳಿತ, ಸ್ಥಳೀಯ ರೈತರ ಗಮನಕ್ಕೆ ತರಬೇಕಿದೆ. ಕಿರು ನೀರಾವರಿ ಇಲಾಖೆ ಯಾವುದೇ ಸಮಾಲೋಚನೆ ನಡೆಸದೆ ಹಲಗೆಯನ್ನು ತೆಗೆದುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಮಳೆಗಾಲದಲ್ಲೂ ಕುಡಿಯುವ ನೀರನ್ನು ಮನೆಗಳಿಗೆ ಒದಗಿಸಬೇಕಾದ ಅನಿವಾರ್ಯ ಕಂಡು ಬರುತ್ತಿದೆ.
-ಕೆ. ಸುದರ್ಶನ್‌ ರಾವ್‌ ಮತ್ತು ಎಂ.ಜಿ. ನಾಗೇಂದ್ರ, , ಸದಸ್ಯರು, ಕುರ್ಕಾಲು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next