ಹುಣಸೂರು: ಈ ಭಾಗದ ಗ್ರಾಮೀಣ ಹಬ್ಬಗಳಲ್ಲೊಂದಾದ ಕುಂತಿದೇವಿ ಪೂಜೆಯನ್ನು ಹುಣಸೂರು ನಗರದ ಶಿವಜ್ಯೋತಿ ನಗರ ಬಡಾವಣೆಯಲ್ಲಿ ಅದ್ದೂರಿಯಾಗಿ ಆಚರಿಸಿದರು. ಈ ಸಂಭ್ರಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಮಂಗಳವಾರ ರಾತ್ರಿ ನಗರದ ಶಿವಜ್ಯೋತಿ ನಗರ ಬಡಾವಣೆಯಲ್ಲಿ ಆಯೋಜಿಸಿದ್ದ ಕುಂತಿದೇವಿ ಪೂಜಾ ಕಾರ್ಯಕ್ರಮಕ್ಕಾಗಮಿಸಿದ ಶಾಸಕ ಮಂಜುನಾಥರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಿ, ಪುಷ್ಪವೃಷ್ಠಿ ನಡೆಸಿ ಪೂಜಾ ಸ್ಥಳಕ್ಕೆ ಕರೆತಂದರು. ಈ ವಿಶಿಷ್ಟಪೂಜೆಯಲ್ಲಿ ಶಾಶಕ ಮಂಜುನಾಥರು ಭಾಗಿಯಾಗಿ ತುಳಸಿಕಟ್ಟೆಗೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕರು ಕಾರ್ತಿಕ ಮಾಸದಲ್ಲಿ ಹಳ್ಳಿ ಮೈಸೂರು ಭಾಗದ ಗ್ರಾಮೀಣ ಪ್ರದೇಶದ ರೈತರು ಸುಗ್ಗಿ ಕಾಲದ ವೇಳೆಯಲ್ಲಿ ತುಳಸಿಕಟ್ಟೆಗೆ ಪೂಜೆ ಸಲ್ಲಿಸಿ ಕುಂತಿದೇವಿ ಹಬ್ಬ ಆಚರಿಸಿ ಸಂಭ್ರಮಿಸುವುದು ವಾಡಿಕೆ. ಹಿಂದೂಗಳಾದ ನಾವುಗಳು ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಪದ್ದತಿಗಳನ್ನು ಇಂದಿಗೂ ಹಳ್ಳಿಗಳಲ್ಲಿ ಆಚರಿಸುತ್ತಿದ್ದು, ಇಂತಹ ಧಾರ್ಮಿಕ ಭಾವನೆಯುಳ್ಳ ಹಬ್ಬದಲ್ಲಿ ನೂರಾರು ಮಂದಿ ಭಾಗಿಯಾಗಿ ಸಂಸ್ಕೃತಿ ವಿನಿಮಯ ಮಾಡಿಕೊಂಡಂತಾಗಲಿದೆ. ಇಂತಹ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಯುವ ಜನಾಂಗದವರು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಈ ವೇಳೆ ಬಡಾವಣೆಯ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿತರಿಸಲಾಯಿತು.