ಶಿರ್ವ: ಸಮಾಜದಲ್ಲಿ ಸಜ್ಜನರಿಗೆ ತಮ್ಮ ಹೆಸರು ಹತ್ತು ಜನರಿಗೆ ಉಪಕಾರವಾಗುವ ಮೂಲಕ ಮುನ್ನೆಲೆಗೆ ಬರಬೇಕು ಎಂಬ ಆಶಯ ಇರುತ್ತದೆ. ಕೆಲವರ ಆಶಯ ಈಡೇರಿದರೆ ಕೆಲವರ ನಿರೀಕ್ಷೆ ಹುಸಿಯಾಗುತ್ತದೆ. ಸೇವೆಯ ಮೂಲಕ ಜನಮಾನಸದಲ್ಲಿ ನೆಲೆಸುವುದಕ್ಕೆ ದೇವರು ಪ್ರೇರಣೆ ನೀಡುತ್ತಾರೆ.
ಇದಕ್ಕೆ ದೇಗುಲಗಳು ಪೂರಕ ವಾತಾವರಣವನ್ನು ಒದಗಿಸುತ್ತವೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅವರು ಕುಂಜಾರು ಪರಶುರಾಮ ದೇವಸ್ಥಾನದಲ್ಲಿ ಮೇ 7ರಂದು ಜರಗಿದ ಪರಶುರಾಮ ಜಯಂತ್ಯುತ್ಸವ ಮತ್ತು ಕೆ. ಸುಬ್ರಹ್ಮಣ್ಯ ಭಟ್ ಮತ್ತು ಮನೆಯವರ ದೇಣಿಗೆಯಿಂದ ನಿರ್ಮಾಣಗೊಂಡ ರಾಜ ಗೋಪುರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಹಳ್ಳಿಯಲ್ಲಿ ಅಪಾರ ಸಾನ್ನಿಧ್ಯವಿರುವ ದೇಗುಲಗಳಿದ್ದು ದಾರಿಯಲ್ಲಿ ಹೋಗುವವರಿಗೆ ಈ ದೇಗುಲಗಳ ಇರುವಿಕೆಯನ್ನು ತಿಳಿಸಿಕೊಡುವುದೇ ರಾಜಗೋಪುರಗಳು. ಈ ಗೋಪುರಗಳನ್ನು ನಿರ್ಮಿಸಿರುವ ದಾನಿಗಳ ಹೆಸರು ದೇಗುಲಕ್ಕೆ ಭೇಟಿ ನೀಡುವ ಭಕ್ತರ ಹೆಸರಿನಲ್ಲಿ ಸದಾ ಜೀವಂತವಿರುತ್ತದೆ ಎಂದು ಶ್ರೀಗಳು ಹೇಳಿದರು.
ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪ್ರಾತಃಕಾಲ ಉಷಃಕಾಲ ಪೂಜೆ, ಪಂಚಾಮೃತ ಅಭಿಷೇಕ, ಪೂರ್ವಾಹ್ನ ನವಕಪ್ರದಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಅದಮಾರು ಮಠದ ಪಟ್ಟದ ದೇವರಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಭಜನೆ, ರಂಗಪೂಜೆ, ರಥೋತ್ಸವ, ಬಲಿ, ಪಲ್ಲಕಿ ಉತ್ಸವ ನಡೆಯಿತು.
ಗಿರಿಧರ್ ಕುಂಜಾರ್, ಸುಬ್ರಹ್ಮಣ್ಯ ಭಟ್, ಅರ್ಚಕ ವಿನಯಪ್ರಸಾದ್ ಭಟ್, ದುರ್ಗಾದೇವಿ ದೇಗುಲದ ಅರ್ಚಕ ಗೋಪಾಲಕೃಷ್ಣ ಭಟ್, ಗೋಪುರದ ಎಂಜಿನಿಯರ್ ಲಕೀÒ$¾ನಾರಾಯಣ ಉಪಾಧ್ಯ, ರಾಜಮೂರ್ತಿ ಭಟ್, ಮೋಹನ್ ಶೆಟ್ಟಿ, ಬೈಲೂರು ಕೃಷ್ಣ ಭಟ್, ಕುಳೇದು ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.