Advertisement

ಕುಣಿಗಲ್: ಹಾಳಾದ ರೈಲ್ವೆ ಮೇಲ್ಸೇತುವೆ: ಜೀವ ಭಯದಲ್ಲಿ ಸಂಚಾರ

04:53 PM Oct 06, 2022 | Team Udayavani |

ಕುಣಿಗಲ್: ಪಟ್ಟಣದ ಚಿಕ್ಕಕೆರೆ ರೈಲ್ವೆ ಮೇಲ್ಸೇತುವೆ ರಾಜ್ಯ ಹೆದ್ದಾರಿ ಟಿ.ಎಂ. ರಸ್ತೆ ಹಾಳಾಗಿದ್ದು, ಅಪಘಾತಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್‌ ಹಮೀದ್ ವಾರದ ಒಳಗೆ ರಸ್ತೆ ದುರಸ್ಥಿ ಮಾಡದಿದ್ದರೆ ಸಾರ್ವಜನಿಕರೆಲ್ಲರೂ ಸೇರಿ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಗುಂಡಿಗಳು ಬಿದ್ದಿರುವ ಪಟ್ಟಣದ ಚಿಕ್ಕಕೆರೆ ಮೇಲ್ಸೇತುವೆ ಬಳಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಹೆದ್ದಾರಿ 33 ಟಿ.ಎಂ. ರಸ್ತೆ ತುಮಕೂರು, ಮದ್ದೂರು, ಮಂಡ್ಯ, ಮೈಸೂರು, ಚನ್ನಪಟ್ಟಣ, ರಾಮನಗರವನ್ನು ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಬಸ್, ಟಿಪ್ಪರ್, ಲಾರಿ, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಸಂಚರಿಸುತ್ತಿವೆ. ಆದರೆ ಇಲ್ಲಿನ ರೈಲ್ವೆ ಮೇಲ್ಸೇತುವೆ ಸಂಪೂರ್ಣ ಹಾಳಾಗಿ ಗುಂಡಿಗಳು ಬಿದ್ದಿವೆ. ರಸ್ತೆಗೆ ಅಳವಡಿಸಿರುವ ಕಂಬಿಗಳು ಮೇಲೆದ್ದು ತುಂಡಾಗಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಗುಂಡಿಗಳಿಗೆ ಬಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ದೊಡ್ಡ ಗಾತ್ರದ ಲಾರಿಗಳು ಮೇಲ್ಸೇತುವೆಯಲ್ಲಿ ಸಂಚರಿಸಿದರೆ ಸೇತುವೆ ನಡುಗುತ್ತದೆ. ಸಣ್ಣ ವಾಹನಗಳು ಹಾಗೂ ಪ್ರಯಾಣಿಕರಿಗೆ ಭಯದ ವಾತಾವರಣ ಸೃಷ್ಠಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೇಲ್ಸೇತುವೆ ಯಾವ ಇಲಾಖೆಗೆ ಸೇರಿದ್ದು? : ಕೆಶಿಫ್‌ ವತಿಯಿಂದ 2015-16ನೇ ಸಾಲಿನಲ್ಲಿ ಮಳವಳ್ಳಿಯಿಂದ ಕುಣಿಗಲ್ ಮಾರ್ಗವಾಗಿ ಪಾವಗಡದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿತು. ಇದೇ ವೇಳೆ ರೈಲ್ವೆ ಇಲಾಖೆಯಿಂದ ರೈಲ್ವೆ ಹಳಿ ಕಾಮಗಾರಿ ನಡೆಯುತ್ತಿತು. ಈ ಸಂದರ್ಭದಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ.

ಮೇಲ್ಸೇತುವೆ ನಿರ್ಮಾಣವಾಗಿ ಸುಮಾರು ಏಳು ವರ್ಷಗಳು ಮಾತ್ರ ಆಗಿದೆ. ಆಗಲೇ ಮೇಲ್ಸೇತುವೆ ರಸ್ತೆ ಹಾಳಾಗಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕೆಶಿಫ್‌ನವರು ರಸ್ತೆ ನಿರ್ವಹಣೆ ಮಾಡಬೇಕು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಕೆಶಿಫ್ ಅಧಿಕಾರಿಗಳಿಗೆ ಕರೆ ಮಾಡಿದರೆ ಪೋನ್ ಕರೆ ಸ್ವೀಕರಿಸುತ್ತಿಲ್ಲ. ಹಾಗಾದರೇ ನಿರ್ಮಾಣ ಕೆಶಿಫ್‌ಗೋ, ಲೋಕೋಪಯೋಗಿ ಇಲಾಖೆಗೋ ಅಥವಾ ರೈಲ್ವೆ ಇಲಾಖೆಗೂ ಎಂಬುದು ತಿಳಿಯುತ್ತಿಲ್ಲ. ಮೂರು ಇಲಾಖೆಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತೆಯಿಂದ ನಾಗರಿಕರು ಯಾತನೆ ಪಡುವಂತಾಗಿದೆ. ಹಾಳಾಗಿರುವ ರಸ್ತೆಯನ್ನು ವಾರದ ಒಳಗೆ ರಾಜ್ಯ ಸರ್ಕಾರ ದುರಸ್ಥಿ ಮಾಡದಿದ್ದಲ್ಲಿ ರಾಜ್ಯ ಹೆದ್ದಾರಿ, 33 ಟಿ.ಎಂ. ರಸ್ತೆ, ಚಿಕ್ಕಕೆರೆ ಮೇಲ್ಸೇತುವೆ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮುಖಂಡ ಸನಾವುಲ್ಲಾ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next