ಕುಣಿಗಲ್: ಹೌಸಿಂಗ್ ಬೋರ್ಡ್ ಕಾಲೋನಿಯ ಮೂರು ಮನೆ, ಉಪನೊಂದಾವಣೆ ಇಲಾಖೆ ಕಚೇರಿ ಸೇರಿದಂತೆ ಆರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಗೌಡಗೆರೆ ಗ್ರಾಮದ ನಿವಾಸಿ ಗೋವಿಂದರಾಜು ಬಂಧಿತ ಆರೋಪಿ.
ಇತ್ತೀಚಿಗೆ ಪಟ್ಟಣದ ಹೌಸಿಂಗ್‌ಬೋರ್ಡ್ ಕಾಲೋನಿಯ ಮೂರು ಮನೆ, ಸಬ್‌ರಿಜಿಸ್ಟರ್ ಕಚೇರಿ ಹಾಗೂ ಟಿಎಪಿಎಂಸಿಯಲ್ಲಿ ಕಳ್ಳತನಗೈದು ಪರಾರಿಯಾಗಿದ್ದ.ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಾಗಿತ್ತು. ಪೊಲೀಸರು ಕಾರ್ಯಚರಣೆ ನಡೆಸಿ ಗೋವಿಂದ ರಾಜು ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಬಿಡುಗಡೆಗೆ ಹೈಡ್ರಾಮ: ಆರೋಪಿ ಗೋವಿಂದರಾಜು ರೈತನಾಗಿದ್ದು, ಆತನ್ನು ಯಾವುದೇ ಕಳ್ಳತನ ಮಾಡಿಲ್ಲ. ಹಾಗಾಗಿ ಆತನ್ನು ಬಿಡುಗಡೆ ಮಾಡುವಂತೆ ರಾಜಕೀಯ ಪಕ್ಷದ ಮುಖಂಡರು ಹಾಗೂ ಆರೋಪಿಗಳ ಸಂಬಂಧಿಕರು ಕಳೆದ ರಾತ್ರೋರಾತ್ರಿ ಠಾಣೆ ಎದುರು ಹೈಡ್ರಾಮ ಮಾಡಿದ್ದರು. ಆದರೆ ಇದಕ್ಕೆ ಪೊಲೀಸರು ಸೊಪ್ಪು ಹಾಕದೇ ತನಿಖೆಯನ್ನು ತೀವ್ರಗೊಳಿಸುತ್ತಿದಂತೆ ಬೆಚ್ಚಿಬಿದ್ದ ಆರೋಪಿಯ ಹೆಂಡತಿ ಹಾಗೂ ಮತ್ತೊಬ್ಬ ಆರೋಪಿಯ ತಮ್ಮ ಕಳವು ಮಾಡಿದ್ದ ಮಾಲುಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:411 ಕೋಟಿ ರೂ. ಮೊತ್ತದ ಬೀಳಗಿಯ ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ
ಸತ್ಯಾಂಶ ತಿಳಿಯುತ್ತಿದಂತೆ ಆರೋಪಿಯನ್ನು ಬಿಡಿಸಲು ಬಂದ ರಾಜಕೀಯ ಪಕ್ಷದ ಮುಖಂಡರು ಅಲ್ಲಿಂದ ಕಾಲ್ಕಿತ್ತರು. ಹಲವು ದಿನಗಳಿಂದ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗುತ್ತಿದ್ದು, ಪೊಲೀಸರಿಗೆ ಇದೊಂದು ಸವಾಲಾಗಿದೆ. ಸವಾಲನ್ನು ಬೆನ್ನತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ವಿವಿಧ ಕಾರ್ಯಚರಣೆ ಕೈಗೊಂಡಿರುವುದು ನಾಗರಿಕರ ಪ್ರಶಂಸೆಗೆ ಕಾರಣವಾಗಿದೆ.