Advertisement

Kunigal: ಹೆಲ್ಮೆಟ್ ಧರಿಸಿ ಬೈಕ್ ಜಾಗೃತಿ ಜಾಥಾ ನಡೆಸಿದ ಶಾಸಕ ಡಾ.ರಂಗನಾಥ್

09:01 PM Oct 11, 2023 | Team Udayavani |

ಕುಣಿಗಲ್ : ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಕಡ್ಡಾಯ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ದಿಸೆಯಲ್ಲಿ ಬುಧವಾರ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ನೇತೃತ್ವದಲ್ಲಿ ಪೊಲೀಸರು, ವಕೀಲರು, ನಾಗರಿಕರು ಕುಣಿಗಲ್ ಪಟ್ಟಣದಲ್ಲಿ ಬೈಕ್ ಜಾಥಾ ನಡೆಸಿದರು.

Advertisement

ಇಲ್ಲಿನ ಪೊಲೀಸ್ ಠಾಣಾ ಮುಂಭಾಗದಲ್ಲಿ ಕುಣಿಗಲ್ ಪೊಲೀಸರು ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ, ಬೈಕ್ ಜಾಗೃತಿ ಜಾಥಾಕ್ಕೆ ಶಾಸಕ ಡಾ.ಹೆಚ್.ಡಿ.ರಂಗನಾಥ್ ಚಾಲನೆ ನೀಡಿದರು, ಬಳಿಕ ಜಾಥಾ ಹಳೇಯ ರಾಷ್ಟ್ರೀಯ ಹೆದ್ದಾರಿ ೪೮ ರ ಬಿ.ಎಂ ರಸ್ತೆಯಿಂದ ಎನ್.ಹುಚ್ಚಮಾಸ್ತಿಗೌಡ ವೃತ್ತ, ಗ್ರಾಮ ದೇವತೆ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ಸಮೀಪ ಆಯೋಜಿಸಲಾಗಿದ್ದ, ಸಾರ್ವಜನಿಕರ ಸಭೆಗೆ ಆಗಮಿಸಿತು.

ಹೆಲ್ಮೆಟ್ ಧರಿಸಿ ಬೈಕ್ ಚಾಲನೆ 
ಬೈಕ್ ಸವಾರರು ಹೆಲ್ಮೆಟ್ ಧರಿಸುವ ಸಂಬಂಧ ಅರಿವು ಮೂಡಿಸಲು ಸ್ವತಃ ಶಾಸಕ ಡಾ.ಹೆಚ್.ಡಿ.ರಂಗನಾಥ್, ಡಿವೈಎಸ್‌ಪಿ ಲಕ್ಷ್ಮೀ ಕಾಂತ್, ಸಿಪಿಐಗಳಾದ ನವೀನ್‌ಗೌಡ, ಮಾಧ್ಯನಾಯಕ್, ಪುರಸಭಾ ಮುಖ್ಯಾಧಿಕಾರಿ ಶಿವಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್(ಬಾಬು) ಮೊದಲಾದವರು ಹೆಲ್ಮೆಟ್ ಧರಸಿ ಬೈಕ್ ಚಾಲನೆ ಮಾಡಿದರು, ಇದೇ ವೇಳೆ ಎನ್.ಹುಚ್ಚಮಾಸ್ತಿಗೌಡ ವೃತ್ತದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ದ್ವನಿವರ್ಧಕಕ್ಕೆ ಶಾಸಕರು ಚಾಲನೆ ನೀಡಿದರು.

150 ಜನರಿಗೆ ಹೆಲ್ಮೆಟ್ ವಿತರಣೆ
ಪೊಲೀಸ್ ಇಲಾಖೆ ಮತ್ತು ಶಾಸಕರ ಸಹಯೋಗದಲ್ಲಿ ಪತ್ರಕರ್ತರು ಸೇರಿದಂತೆ ೧೫೦ ಮಂದಿ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಹಾಗೂ ಸಾರ್ವಜನಿಕರ ಸಹಾಯದಿಂದ 80 ಮಂದಿ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.

ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾತನಾಡಿ ಪಟ್ಟಣವು ದಿನ ಕಳೆದಂತೆ ಬೃಹತ್ ಕಾರವಾಗಿ ಬೆಳೆಯುತ್ತಿದೆ, ಇದರ ಜತೆಯಲ್ಲೇ ವಾಹನಗಳ ಸಂಚಾರ, ನಾಗರೀಕರ ಹೋಡಾಟ ದುಪ್ಪಟವಾಗಿದೆ, ಈ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಜತೆಗೆ ರಸ್ತೆಗೆ ಡಾಂಬರೀಕರಣವಾಗಿದೆ, ಕೆಲ ಭಾಗ ಹೊರತು ಪಡಿಸಿ ರಸ್ತೆಯ ಎರಡು ಕಡೆ ಚರಂಡಿ ಮಾಡಲಾಗಿದೆ, ಶೀಘ್ರದಲ್ಲೇ ಮಾರ್ಕಿಂಗ್, ಪಾರ್ಕಿಂಗ್ ಲೈನ್ ಹಾಗೂ ಹುಚ್ಚಮಾಸ್ತಿಗೌಡ, ಗ್ರಾಮ ದೇವತೆ ವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗುವುದು ಎಂದು ಹೇಳಿದರು.

Advertisement

ಕಳವಳ
ಇತ್ತೀಚಿಗೆ ತಾಲೂಕಿನಲ್ಲಿ ಬೈಕ್, ಕಾರುಗಳ ಅಪಘಾತಗಳು ಹೆಚ್ಚಾಗುತ್ತಿವೆ, ಆನೇಕ ಮಂದಿ ಮೃತಪಟ್ಟಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ, ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ ಎಂದರು, ಪ್ರತಿಯೊಬ್ಬರು ರಸ್ತೆ ಸುರಕ್ಷತೆ ಕ್ರಮವನ್ನು ಅನುಸರಿಸಬೇಕು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಿದರೆ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದರು.

ಮಾನವೀಯತೆ ಇರಲಿ
ಅಪಘಾತವಾಗಿ ತೀವ್ರ ಸ್ವರೂಪವಾಗಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದು ಪ್ರಾಣ ಉಳಿಸಬೇಕೆಂದು ನಾಗರೀಕರಿಗೆ ಶಾಸಕರು ಕರೆ ನೀಡಿದರು.

ಡಿವೈಎಸ್‌ಪಿ ಲಕ್ಷ್ಮಿಕಾಂತ್ ಮಾತನಾಡಿ 2023 ರಲ್ಲಿ ಸಾಮಾನ್ಯ 270 ಹಾಗೂ ಮಾರಣಾಂತಿ 79 ಅಪಘಾತಗಳಾಗಿವೆ, ಇದರಲ್ಲಿ84 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 315 ಜನ ಗಾಯಗೊಂಡಿದ್ದಾರೆ, ಇದಕ್ಕೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಇಲ್ಲದೆ ಇರುವುದು ಈ ಅವಘಡಕ್ಕೆ ಕಾರಣವಾಗಿದೆ, ತಾಲೂಕಿನಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿ, ಮೂರು ರಾಜ್ಯ ಹೆದ್ದಾರಿ ಬರುತ್ತವೆ, ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಮಧ್ಯಪಾನ ಮಾಡಿ ಬೈಕ್ ಸವಾರಿ ಮಾಡಬಾರದು, ಇನ್ಯೂರೆನ್ಸ್, ಡಿ.ಎಲ್ ಹಾಗೂ ಗಾಡಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಇಟ್ಟುಕೊಳ್ಳಬೇಕು, ವಾಹನಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಅಪಘಾತದಲ್ಲಿ ಮೃತಪಟ್ಟರೇ ನಿಮ್ಮ ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಎಚ್ಚರಿಕೆ ನೀಡಿದ ಅವರು ಸಾರಿಗೆ ನಿಯಮ ಹಾಗೂ ರಸ್ತೆ ಸುರಕ್ಷತೆಯನ್ನು ಅನುಸರಿಸಿ ತಮ್ಮ ಜೀವವನ್ನು ಕಾಪಾಡಿಕೊಳ್ಳಬೇಕು ನಿಮ್ಮ ಜೀವನ ಸುರಕ್ಷಿತವಾದರೇ ನಿಮ್ಮ ಕುಟುಂಬ ಸುರಕ್ಷಿತವಾಗಿ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆಯ ಜನಪ್ರತಿನಿಧಿಗಳು ಸೇರಿದಂತೆ ಆನೇಕ ಮಂದಿ ಗಣ್ಯರು ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next