ಕುಣಿಗಲ್ : ಹೆಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ವಾಪಸಾಗುತ್ತಿದ್ದ ಹೆಚ್‌ಐವಿ ನಿಯಂತ್ರಣ ಸಮಾಲೋಚಕನಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾಲು ಸಂಪೂರ್ಣವಾಗಿ ನಜ್ಜು ಗುಜ್ಜಾಗಿರುವ ಘಟನೆ ಗುರುವಾರ ರಾಜ್ಯ ಹೆದ್ದಾರಿ 33 ರ ಟಿ.ಎಂ ರಸ್ತೆ ಪಟ್ಟಣದ ಚಿಕ್ಕಕೆರೆ ಏರಿ ಮೇಲೆ ನಡೆದಿದೆ.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೆಚ್‌ಐವಿ ನಿಯಂತ್ರಣ ಸಮಾಲೋಚಕ ಉಮೇಶ್ ಚಂದ್ರ (42) ಕಾಲು ಕಳೆದುಕೊಂಡ ವ್ಯಕ್ತಿ.
ಸಂತೇಮಾವತ್ತೂರು ಸಮೀಪದ ಗ್ರಾಮ ಒಂದರಲ್ಲಿ ಇರುವ ಹೆಚ್‌ಐವಿ ಸೋಂಕಿತ ವ್ಯಕ್ತಿಯು ದೂರವಾಣಿ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ, ಉಮೇಶ್‌ಚಂದ್ರ ಅವರ ಸೋಂಕಿತ ವ್ಯಕ್ತಿಯ ಮನೆಗೆ ಬೈಕ್‌ನಲ್ಲಿ ಹೊಗಿ ಚಿಕಿತ್ಸೆ ನೀಡಿ ಕುಣಿಗಲ್‌ಗೆ ವಾಪಸ್ಸ್ ಆಗುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಕುಣಿಗಲ್ ಕಡೆಯಿಂದ ಹುಲಿಯೂರುದುರ್ಗ ಕಡೆ ಹೋಗುತ್ತಿದ್ದ ಕಾರು ಉಮೇಶ್ ಚಂದ್ರ ಬೈಕ್‌ಗೆ ಢಿಕ್ಕಿ ಹೊಡೆದು ಕಾರಿನ ಚಕ್ರ ಕಾಲಿನ ಮೇಲೆ ಹರಿದ ಪರಿಣಾಮ ಉಮೇಶ್‌ಚಂದ್ರ ಅವರ ಬಲಗಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಅವರನ್ನು ಅಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ, ಢಿಕ್ಕಿ ಹೊಡೆದ ಕಾರಿನ ಚಾಲಕ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.