ಹುಬ್ಬಳ್ಳಿ: ಸಂಗೀತ ಸಾಧನೆ, ಪ್ರೋತ್ಸಾಹಕ್ಕೆ ತನ್ನದೇ ಖ್ಯಾತಿ ಪಡೆದ, ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರಿಗೆ ರಾಜಕೀಯ ಜೀವನ ಪ್ರವೇಶಕ್ಕೆ ವೇದಿಕೆಯಾದ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಅಪಸ್ವರ ಹೆಚ್ಚತೊಡಗಿದೆ. ಬಿಜೆಪಿಯಲ್ಲಿ ಪೈಪೋಟಿ ಬೀದಿಕಾಳಗ ರೂಪ ಪಡೆದುಕೊಳ್ಳುವ ಮಟ್ಟಕ್ಕೆ ಬಂದಿದೆ.
ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಅವರಿಗೆ ಈ ಬಾರಿ ಟಿಕೆಟ್ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಪೈಪೋಟಿ ತನ್ನದೇ ನೆಲೆಗಟ್ಟಿನಲ್ಲಿ ಸುಳಿದಾಡುತ್ತಿದ್ದರೆ, ಬಿಜೆಪಿಯಲ್ಲಿ ಪೈಪೋಟಿ ಪಕ್ಷದ ವರಿಷ್ಠರಿಗೆ ತಲೆಬಿಸಿಯಾಗುವಂತೆ ಮಾಡಿದೆ.
ಕುಂದಗೋಳದಲ್ಲಿ ಬಿಜೆಪಿಗೆ ಬಿಜೆಪಿಯೇ ಪೈಪೋಟಿ ಅಥವಾ ವೈರಿ ಎನ್ನುವಂತಹ ಸ್ಥಿತಿ ಇದೆ. ಇಬ್ಬರಲ್ಲಿ ಯಾರೊಬ್ಬರಿಗೆ ಟಿಕೆಟ್ ದೊರೆತರು ಇನ್ನೊಬ್ಬರು ರೆಬಲ್ ಆಗುವ ಇಲ್ಲವೆ ಪಕ್ಷದೊಳಗಿದ್ದುಕೊಂಡೇ ಕರಾಮತ್ತು ತೋರಿಸುವ ಸಾಧ್ಯತೆ ಇಲ್ಲದಿಲ್ಲ ಎಂಬುದು ಕ್ಷೇತ್ರದ ಸಾಮಾನ್ಯ ಕಾರ್ಯಕರ್ತನಿಗೂ ಗೊತ್ತಿರುವ ಸಂಗತಿ.
ಒಂದು ಕಡೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಬಂಧಿ, ಮತ್ತೂಂದು ಕಡೆ ಸಚಿವ ಸಿ.ಸಿ. ಪಾಟೀಲರ ಸಂಬಂಧಿ ನಡುವಿನ ಟಿಕೆಟ್ ಜಿದ್ದಾ ಜಿದ್ದಿ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ನನಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಸ್ಪರ್ಧೆಗೆ ಸಿದ್ಧ ಎಂಬ ಸಂದೇಶ ರವಾನೆಯಾ ಗುತ್ತಿದೆ. ಇಬ್ಬರ ನಡುವೆ ವ್ಯಕ್ತಿಗತ ಪ್ರತಿಷ್ಠೆಯಾಗಿ ಪರಿಗಣಿಸಿರುವುದು ಕ್ಷೇತ್ರದಲ್ಲಿ ಬಿಜೆಪಿಯನ್ನು ಬಡವಾಗಿಸತೊಡಗಿದೆ.
Related Articles
ಮತ್ತೊಬ್ಬರು ರೆಬಲ್?:ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗಿಳಿಯಲು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಹಾಗೂ ಎಂ.ಆರ್.ಪಾಟೀಲ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರ ನಡುವಿನ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ ಕುಂದಗೋಳದಲ್ಲಿ ಇತ್ತೀಚೆಗೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಇಬ್ಬರು ಮುಖಂಡರ ಬೆಂಬಲಿಗರು ಬಹಿರಂಗವಾಗಿಯೇ ಕೈ ಕೈ ಮಿಲಾಯಿಸಿ ಗದ್ದಲಕ್ಕೆ ಮುಂದಾಗಿದ್ದು ತೀವ್ರತರ ಪೈಪೋಟಿಗೆ ಸಾಕ್ಷಿಯಾಗಿದೆ.
ಕುಂದಗೋಳ ಕ್ಷೇತ್ರದ ಇತಿಹಾಸದಲ್ಲಿಯೇ 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡಿತ್ತು. ಕ್ಷೇತ್ರ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ ಕಲಘಟಗಿ ಕ್ಷೇತ್ರದಿಂದ ವಲಸೆ ಬಂದಿದ್ದ ಎಸ್.ಐ.ಚಿಕ್ಕಗೌಡ್ರ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರಲ್ಲದೆ, ಅನಂತರ ಬಿಜೆಪಿಗೆ ಬಂದು 2018ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಬಿಜೆಪಿಯಿಂದ ಮತ್ತೂ ಮ್ಮೆ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರೆ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಾಗಿಲ್ಲ. ಆದರೂ ಈ ಬಾರಿ ತಮಗೇ ಟಿಕೆಟ್ ನೀಡಬೇಕು ಎಂಬ ತೀವ್ರ ಒತ್ತಡಕ್ಕೆ ಮುಂದಾಗಿದ್ದಾರೆ.
ಎಂ.ಆರ್. ಪಾಟೀಲ್ ಜೋಶಿ ಬಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೆಂಬಲದೊಂದಿಗೆ ಎಂ.ಆರ್. ಪಾಟೀಲ್ ಟಿಕೆಟ್ ಕಸರತ್ತಿಗೆ ಮುಂದಾಗಿದ್ದರೆ, ಎಸ್.ಐ. ಚಿಕ್ಕನಗೌಡ್ರ ಬಿಎಸ್‌ವೈ ಶ್ರೀರಕ್ಷೆಯೊಂದಿಗೆ ತಮ್ಮದೇ ಯತ್ನದಲ್ಲಿ ತೊಡಗಿದ್ದಾರೆ. ಇಬ್ಬರಲ್ಲಿ ಯಾರೊಬ್ಬರಿಗೆ ಟಿಕೆಟ್ ನೀಡಿದರೂ ಇನ್ನೊಬ್ಬರು ರೆಬಲ್ ಆಗುವುದು ಖಚಿತ. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಚಿಕ್ಕನಗೌಡರ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ನಡುವೆ ಚಿಕ್ಕನಗೌಡ್ರ ಜೆಡಿಎಸ್‌ಗೆ ಹೋಗಬಹುದು ಎಂಬ ಸುದ್ದಿಯೂ ಹರಿದಾಡುತ್ತಿದೆ.
3ನೇ ವ್ಯಕ್ತಿ ಚಿಂತನೆ?: ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ಬಂದಿದ್ದೇನೆ. ಕೆಜೆಪಿಯಿಂದ ಬಂದರೂ 2018ರಲ್ಲಿ ಎಸ್.ಐ. ಚಿಕ್ಕನಗೌಡ್ರಗೆ ಅವಕಾಶ ನೀಡಲಾಯಿತು. 2018ರ ಚುನಾವಣೆ ಹಾಗೂ 2019ರ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದು, ಅವರ ಬದಲು ತಮಗೆ ಟಿಕೆಟ್ ನೀಡಬೇಕು ಎಂಬ ವಾದಕ್ಕೆ ಎಂ.ಆರ್. ಪಾಟೀಲ್ ಮುಂದಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಎಸ್.ಐ. ಚಿಕ್ಕನಗೌಡ್ರ 2008ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಕ್ಷಕ್ಕೆ ಗೆಲುವು ತಂದುಕೊಟ್ಟಿ ದ್ದೇನೆ, 2013ರಲ್ಲಿ ಬದಲಾದ ರಾಜಕೀಯ ಸ್ಥಿತಿಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರೂ ಎರಡನೇ ಸ್ಥಾನ ಪಡೆದಿದ್ದೆ. ಬಿಜೆಪಿ ಯಿಂದ ಸ್ಪರ್ಧಿಸಿದ್ದ ಎಂ.ಆರ್. ಪಾಟೀಲ್ ಮೂರನೇ ಸ್ಥಾನಕ್ಕಿಳಿದ್ದಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ 64,871 ಮತ ಪಡೆದರೆ, ಬಿಜೆಪಿ ಅಭ್ಯರ್ಥಿಯಾಗಿ ನಾನು 64,237 ಮತಗಳನ್ನು ಪಡೆದಿದ್ದೇನೆ. ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನು ಕುಂಪದ ಅಲೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ 77,640 ಮತ ಪಡೆದರೆ, ಬಿಜೆಪಿ ಅಭ್ಯರ್ಥಿಯಾಗಿ ನಾನು 76,039 ಮತ ಪಡೆದಿದ್ದೇನೆ. ಕ್ಷೇತ್ರದ ಜನತೆ ಒಲವು ನನ್ನ ಮೇಲಿದೆ ಎಂಬ ವಾದಕ್ಕೆ ಮುಂದಾಗಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂಬ ಹೆಸರುಗಳು ನೋಡಿದಾಗ ಪ್ರಮುಖವಾಗಿ ಎಸ್. ಐ.ಚಿಕ್ಕನಗೌಡ್ರ, ಎಂ.ಆರ್.ಪಾಟೀಲ ಹೆಸರುಗಳು ಪ್ರಮುಖವಾಗಿದ್ದರೂ ಇದೀಗ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಮಲ್ಲಿಕಾರ್ಜುನ ಬಾಳಿ ಕಾಯಿ ಹೆಸರು ಮುಂಚೂಣಿಗೆ ಬರತೊಡಗಿದೆ. ಬಾಳಿಕಾಯಿ ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಹಲವರ ಅನಿಸಿಕೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಸಹ ಮೂರನೆಯವರಿಗೆ ಟಿಕೆಟ್ ನೀಡಿದರೆ ಹೇಗೆ ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್‌ನಲ್ಲೂ ಗೊಂದಲ: ಕಾಂಗ್ರೆಸ್ ಪಕ್ಷದಲ್ಲಿಯೂ ಟಿಕೆಟ್ ಪೈಪೋಟಿ ಶುರುವಾಗಿದೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡಬೇಕೋ ಅಥವಾ ಬದಲಾ ಯಿಸಬೇಕೊ ಎಂಬ ಗೊಂದಲ ಸೃಷ್ಟಿಯಾಗಿದೆ. ಸದ್ಯದ ಕಾಂಗ್ರೆಸ್ ಮೂಲಗಳ ಪ್ರಕಾರ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ದೊರೆಯುವುದು ಕಷ್ಟ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ದೊರೆಯದು ಎಂಬ ಪಟ್ಟಿಯಲ್ಲಿಯೂ ಇವರ ಹೆಸರು ಕಾಣಿಸಿ ಕೊಳ್ಳತೊಡಗಿದೆ.
ಎರಡು ಬಾರಿ ಕ್ಷೇತ್ರದ ಶಾಸಕರಾಗಿದ್ದ ಎಂ.ಎಸ್. ಅಕ್ಕಿ ಜನತಾ ಪರಿವಾರ ಬಿಟ್ಟು ಕಾಂಗ್ರೆಸ್ ಸೇರಿದ್ದು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಿವಳ್ಳಿ ಕುಟುಂಬಕ್ಕೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಅನೇಕರದ್ದಾಗಿದೆ. ಎಂ.ಎಸ್.ಅಕ್ಕಿ, ಅರವಿಂದ ಕಟಗಿ, ಉಮೇಶ ಹೆಬಸೂರು, ಜುಟ್ಟಲ ಕುಟುಂ ಬದ ಹೆಸರು ಕೇಳಿ ಬರುತ್ತಿದ್ದು, ಕಾಂಗ್ರೆಸ್‌ನಲ್ಲಿಯೂ ಹಾಲಿ ಶಾಸಕರಿಗೆ ಮಣೆಯೋ ಅಥವಾ ಅವರು ಸೂಚಿಸುವ ವ್ಯಕ್ತಿ ಗೋ, ಇಲ್ಲ ಪಕ್ಷದ ರಾಜ್ಯ ಘಟಕ ತನ್ನದೇ ತೀರ್ಮಾನ ಕೈಗೊಳ್ಳಲಿದೆಯೋ ಎಂಬ ಗೊಂದಲ ಏರ್ಪಟ್ಟಿದೆ.
ಶಿವಳ್ಳಿ ಅಗಲಿಕೆ ಕೊರತೆ
ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಿ.ಎಸ್. ಶಿವಳ್ಳಿ ಅಕಾಲಿಕ ಅಗಲಿಕೆಯಿಂದ ನಾಯಕತ್ವದ ಕೊರತೆ ಕಾಡತೊಡಗಿದೆ. ಚುನಾವಣೆಯಲ್ಲಿ ಗೆಲುವು-ಸೋಲಿನ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ನೆಲೆಗಟ್ಟಿಗೊಳಿಸುವ ಕಾರ್ಯ ಮಾಡಿದ್ದರು. ಟಿ.ಕೆ.ಕಾಂಬಳಿ ಅವರನ್ನು ಹೊರತುಪಡಿಸಿದರೆ ಸತತವಾಗಿ ಎರಡು ಬಾರಿ ಆಯ್ಕೆಯಾದ ಕೀರ್ತಿ ಶಿವಳ್ಳಿ ಅವರದ್ದಾಗಿತ್ತು. ಇದೀಗ ಕಾಂಗ್ರೆಸ್‌ಗೆ ಶಿವಳ್ಳಿ ಅನುಪಸ್ಥಿತಿ ಕಾಡುತ್ತಿದ್ದರೆ, ಕ್ಷೇತ್ರ ಉಳಿಸಿಕೊಳ್ಳುವ ಸಾಹಸ ತೋರಬೇಕಾಗಿದೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿಯೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ.
-ಅಮರೇಗೌಡ ಗೋನವಾರ